Sunday 23 April 2023

ಹೀಗೊ೦ದು ಅನುಭವ -SAHANA HAREKRISHNA

ಅದೊ೦ದು ಮಧ್ಯಾಹ್ನ. ಮನೆಯ ಕರೆಗ೦ಟೆ ಬಾರಿಸಿತು. ಹೋಗಿ ಬಾಗಿಲು ತೆರೆದರೆ ಎದುರಿಗೆ ಪಕ್ಕದ ಮನೆಯ ಅಜ್ಜಿ ಕು೦ಟುತ್ತ ಒಳಗೆ ಬ೦ದಳು. ನನ್ನ ಕೈಯಲ್ಲಿ ಹೂಗುಚ್ಛ ಕೊಟ್ಟು, ತನಗೊ೦ದು ಸಹಾಯ ಮಾಡು ಎ೦ದಳು. '' ಕಳೆದ ವಾರ ಮೆಟ್ಟಿಲು ಜಾರಿ ಬಿದ್ದೆ, ಸೊ೦ಟ ನೋವು. ಡಾಕ್ಟರ್ ಬಳಿ ಹೋಗಿದ್ದೆ. ಫಿಸಿಯೊಥೆರಪಿ ಮಾಡಿಸಿಕೊ ಎ೦ದರು. ಮಸಾಜ್ ಮಾಡುವವರು ಬಹಳ ಹಣ ಕೇಳುತ್ತಿದ್ದಾರೆ. ಸರ್ಕಾರದ ಉಚಿತ ಸೇವೆ ಇದೆಯ೦ತೆ, ನಿನಗೆ ಗೊತ್ತೆ ?'' ಎ೦ದು ಕೇಳಿದಳು. ಇ೦ದಿನವರೆಗೆ ನಮ್ಮ ಕುಟು೦ಬದಲ್ಲಿ ಅ೦ತಹ ಅವಘಡ ಆಗಿಲ್ಲದ ಕಾರಣ ನನಗೆ ಗೊತ್ತಿಲ್ಲವೆ೦ದೆ. ಆಕೆಯ ಮಗ ಅಮೆರಿಕೆಗೆ ಕೆಲಸದ ನಿಮಿತ್ತ ಹೋಗುತ್ತಿರುತ್ತಾನೆ. ಇಲ್ಲಿ ಆಕೆ ಮತ್ತು ಗ೦ಡ. ಇಬ್ಬರಿಗೂ ಆ೦ಗ್ಲ ಭಾಷೆಯ ತೊಡಕು. ಗೂಗಲ್ ನಲ್ಲಿ ಹುಡುಕಿಕೊಡು ಎ೦ದಳು.
ಸರೀ ಎನ್ನುತ್ತಾ ಅ೦ತರ್ಜಾಲದಲ್ಲಿ ಜಾಲಾಡಿದೆ. ವೃದ್ಧರಿಗೆ ಸರ್ಕಾರಿ ಸೌಲಭ್ಯ ಇದೆಯೆ೦ದು, ಹೆಚ್ಚಿನ ಮಾಹಿತಿಗೆ ಫೋನಾಯಿಸಬೇಕು ಎ೦ದು ಓದಿ ಹೇಳಿದೆ. ಕಣ್ಣಲ್ಲೇ ಅವಳು ವಿನ೦ತಿಸಿದನ್ನು ನೋಡಿ, ಕೊಟ್ಟ ನ೦ಬರಿಗೆ ಫೋನಾಯಿಸಿದೆ. ಅತ್ತಲಿನ ದನಿ ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊ೦ಡು ನಮ್ಮ ಬಡಾವಣೆಯ ಜನ ಯಾರಿಗೆ ಸ೦ಪರ್ಕಿಸಬೇಕೆ೦ದು ಇನ್ನೊ೦ದು ನ೦ಬರ್ ಕೊಟ್ಟರು. ಅಜ್ಜಿಗೆ ತಳಮಳ. '' ನೋಡೋಣ, ನಮ್ಮ ಪ್ರಯತ್ನ ಮಾಡೋಣ'' ಎ೦ದು ಆಕೆಗೆ ಸುಮ್ಮನಾಗಿಸಿ, ಮತ್ತೊ೦ದು ನ೦ಬರ್ ಡಯಲ್ ಮಾಡಿದೆ. ಈಗ ಶುರುವಾಯಿತು ಪ್ರಶ್ನೆಗಳ ಸುರಿಮಳೆ. ನಾನು ಯಾರು? ಅಜ್ಜಿಗೆ ಹೇಗೆ ಸ೦ಬ೦ಧ? ಅಜ್ಜಿ ಒ೦ಟಿಯೇ, ತುರ್ತು ಪರಿಸ್ಥಿತಿಯಲ್ಲಿ ಮಗ ಫೋನಿನಲ್ಲಿ ಸಿಗುತ್ತಾನೆಯೆ? ಅಜ್ಜಿಗೆ ಕೆಲಸದಲ್ಲಿ ಸಹಾಯ ಮಾಡಲು ಯಾರಿದ್ದಾರೆ? ಅಜ್ಜಿ ಬಿದ್ದದ್ದು ಹೇಗೆ? ಡಾಕ್ಟರ್ ಫಿಸಿಯೋಥೆರಪಿ ಬೇಕೆ೦ದು ಬರೆದು ಕೊಟ್ಟಿದ್ದಾರೊ? ಡಾಕ್ಟರ್ ಹೆಸರೇನು? ಅಜ್ಜಿ ಒಡಾಡುತ್ತಾಳೊ? ಅಜ್ಜಿ ಪಿ೦ಚಣಿದಾರಳೋ ಹೀಗೆ ಎಲ್ಲ ಪ್ರಶ್ನೆಗಳನ್ನು ಕೇಳಿ, ಅಜ್ಜಿ ಸೌಲಭ್ಯಕ್ಕೆ ಅರ್ಹಳು ಎ೦ದು ಹಸಿರು ನಿಶಾನೆ ನೀಡಿದರು. ಮು೦ದೆರಡು ದಿನಗಳಲ್ಲಿ ಫಿಸಿಯೋಥೆರಪಿ ಮಾಡುವವರೆ ಕರೆಮಾಡುತ್ತಾರೆ. ಮನೆಗೆ ಬ೦ದು ಮಸಾಜ್ ಮಾಡುತ್ತಾರೆ ಎ೦ದರು. ನಾನು ಕೂಡ ದಿನವಿಡೀ ಮನೆಯಲ್ಲಿ ಇರದ ಕಾರಣ ಅವರು ಫೋನಾಯಿಸಿದರೆ ಅಜ್ಜಿಗೆ ಮತ್ತೆ ಭಾಷೆಯ ತೊಡಕು ಆಗಬಹುದೆ೦ದು, '' language preference '' ಕೊಡಲಾಗುವುದೇ ಎ೦ದು ಕೇಳಿದೆ. ಹಿ೦ದಿ ಭಾಷಿಕರು ಇದ್ದರೆ ಒಳ್ಳೆಯದು ಎ೦ದೆ. ಹಿ೦ದಿ ಭಾಷಿಕರು ಇಲ್ಲದಿದ್ದರೆ ಭಾಷಾ ತರ್ಜುಮೆಗಾರರು ಸಹಾಯ ಮಾಡುತ್ತಾರೆ ಎ೦ದರವರು. ನನಗೂ ನಿರಮ್ಮಳವೆನಿಸಿತು. ಅಜ್ಜಿಗೆ ಎಲ್ಲವನ್ನೂ ವಿವರಿಸಿ ಹೇಳಿದೆ. ನೋವನ್ನು ಮರೆತು ಒ೦ದು ಕ್ಷಣ ಕಣ್ಣರಳಿಸಿ ನಕ್ಕಳು.
ಅಜ್ಜಿ ಮನೆಗೆ ಹೋದ ನ೦ತರ ಅದೇಕೋ ಅಮ್ಮ ನೆನಪಾದಳು. ದೂರದ ತವರಿನಲ್ಲಿ ಅಮ್ಮ ಸಾಯುವ ಮುನ್ನ ಅನಾರೋಗ್ಯ ಪೀಡಿತಳಾಗಿ - ಹಾಸಿಗೆ ಹಿಡಿದು ಮಲಗಿದಾಗ, ವೈದ್ಯರೊಬ್ಬರು ಇದೇ ತೆರನ ಥೆರಪಿ ಆಕೆಗೆ ಬೇಕು ಎ೦ದಿದ್ದರು. ಎಷ್ಟು ಪ್ರಯತ್ನ ಪಟ್ಟರೂ ಅದು ಈಡೇರಿರಲಿಲ್ಲ. ಆಕೆಗೂ ಇ೦ತಹ ಒ೦ದು ಸೌಲಭ್ಯ ಸಿಕ್ಕಿದ್ದರೆ ?!! ಎ೦ದು ಒ೦ದು ಕ್ಷಣ ನೆನಸಿ ಕಣ್ಣು ಮ೦ಜಾಯಿತು. ಜಗತ್ತಿನ ವೃದ್ಧ ಅಸಾಯಕರೆಲ್ಲರಿಗೂ ಇ೦ತಹ ಸೇವೆ ಲಭ್ಯವಿರಬೇಕು ಎ೦ದುಕೊಳ್ಳುತ್ತ ಅಜ್ಜಿ ಕೊಟ್ಟ ಹೂಗುಚ್ಛವನ್ನು ಹೂದಾನಿಯಲ್ಲಿ ಜೋಡಿಸಿದೆ.

ಸಹನಾ ಹರೇಕೃಷ್ಣ,
ಟೊರೊ೦ಟೊ, ಕೆನಡಾ. (9th April, 2022)
Submitted by: Sahana Harekrishna
Submitted on: Sun Apr 23 2023 01:51:44 GMT+0530 (India Standard Time)
Category: Article
Acknowledgements: This is Mine. / Original
Language: ಕನ್ನಡ/Kannada
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]

No comments:

Post a Comment