Sunday 27 March 2022

ಸೌಮ್ಯಳ ಸಾಗರೋಲ್ಲಂಘನ -ಸಹನಾ ಹರೇಕೃಷ್ಣ

ದಶಕಗಳ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಾರ್ಷಿಕ ಶ್ವಾನ ಪ್ರದರ್ಶನ ನಡೆಯುತ್ತಿತ್ತು. ಪ್ರವೇಶದ್ವಾರದಲ್ಲಿ ಅನೇಕ ನಾಯಿಮರಿಗಳು ಮಾರಾಟಕ್ಕಿದ್ದವು. ಬುಟ್ಟಿಯೊಂದರಲ್ಲಿ ಪುಟಾಣಿ ಗುಂಡಗಿನ ಲ್ಯಾಬ್ರಡಾರ್ ಮರಿಯೊಂದು ಆಕರ್ಷಿಸಿತು. ಎತ್ತಿ ಮುದ್ದಾಡಿ ಬುಟ್ಟಿಯಲ್ಲಿಟ್ಟು ಪ್ರದರ್ಶನ ನೋಡಲು ಹೋದೆ. ಕಾರ್ಯಕ್ರಮ ಮುಗಿದು ಬರುವಾಗ ಆಗಲೇ ಸೂರ್ಯಾಸ್ತ ವಾಗಿತ್ತು. ಅದೇ ಬುಟ್ಟಿಯಲ್ಲಿ ಆ ಮರಿ ಹಾಗೆಯೇ ಮಲಗಿತ್ತು. “ ಬಹಳ ಒಳ್ಳೆಯ ನಾಯಿ, ಮೇಡಂ ತೊಗೊಳ್ಳಿ,” ಎಂದು ಅದರ ಮಾಲೀಕ ಗೋಗರೆದ. ಪ್ರದರ್ಶನ ನೋಡಲಷ್ಟೇ ಬಂದವಳು - ನಾಯಿ ಮರಿಯೊಂದ ಸಾಕಲು ಪಡೆಯುವ ಯಾವ ಯೋಚನೆಯು ಇರಲಿಲ್ಲ. ಯಜಮಾನರು ನನ್ನ ಮುಖವನ್ನು ನೋಡಿ, “ ನಾವು ತೆಗೆದುಕೊಳ್ಳೋಣ,” ಎಂದು ತಕ್ಷಣದ ನಿರ್ಧಾರ ಮಾಡಿದರು. ಹೀಗೆ ಮನೆಗೆ ಬಂದವಳೇ - ಸೌಮ್ಯ.


ಬಾಲ್ಯದಿಂದಲೇ ನಾಯಿಗಳೊಟ್ಟಿಗೆ ಬೆಳೆದ ನನಗೆ ಸೌಮ್ಯಳ ಪಾಲನೆ ಪೋಷಣೆ ಕಷ್ಟವೆನಿಸಲಿಲ್ಲ. ಸೌಮ್ಯ ಹೆಸರಿಗೆ ಅನ್ವರ್ಥಕಳಾಗಿರಲಿಲ್ಲ. ಬಹಳ ಚೂಟಿ, ಒಂದೆಡೆ ಕೂಡದೆ ದಿನವಿಡಿ ಜಿಗಿಯುತ್ತಿರುತ್ತಿದ್ದಳು. ದುಡಿದು ದಣಿದು ಮನೆಗೆ ಬರುತ್ತಿದ್ದ ಪತಿದೇವರ ಸುತ್ತಲೂ ಓಡಾಡಿ ಕುಣಿದು ಹಾರಿ ತನ್ನದೇ ರೀತಿಯಲ್ಲಿ ನಕ್ಕು ನಗಿಸಿ ಮನ ಹಗುರಾಗಿಸುವ ಗುಣ ಆಕೆಗೆ ಕರಗತವಾಗಿತ್ತು. ನಮ್ಮ ಭಾಷೆ, ನಡೆ-ನುಡಿ, ಆಚಾರ ಜೊತೆಗೆ ವಿಚಾರವು ಆಕೆಗೆ ಅರ್ಥವಾಗುತ್ತಿತ್ತು. ಎರಡು ವರ್ಷವಾಗುತ್ತಾ ಬಂದಾಗ ಆಕೆಯಲ್ಲಿ ಕೊಂಚ ಪ್ರಬುದ್ಧತೆ ಬಂದಿತು. ತಳ್ಳುಗಾಡಿಯಲ್ಲಿ ಮಾರಾಟಕ್ಕೆ ಬರುತ್ತಿದ್ದ ತರಕಾರಿ, ಬಾಳೆಹಣ್ಣು ವ್ಯಾಪಾರಿಗಳು ಗೇಟಿನ ಬಳಿ ಕುಳಿತಿರುತ್ತಿದ್ದ ಸೌಮ್ಯಳಿಗೆ ಹಣ್ಣು ಟೊಮೆಟೊಗಳನ್ನು ನೀಡಿ ಅದರ ಪ್ರೀತಿ ಸ್ವೀಕರಿಸಿಯೇ ಮುಂದೆ ಸಾಗುವುದು ದಿನಚರಿಯಾಗಿತ್ತು. ಮನೆ ಮುಂದೆ ಕ್ರಿಕೆಟ್ ಆಡುವ ಹುಡುಗರು ಚೆoಡು ಸೌಮ್ಯಳ ಬಾಯಿಗೆ ಸಿಕ್ಕಿತೆಂದರೆ ಪುಸಲಾಯಿಸಿ ಚೆಂಡನ್ನು ಹಿಂಪಡೆಯುವ ರೀತಿ ನಗು ಬರಿಸುತ್ತಿತ್ತು. ಮನೆಗೆ ಬಂದವರೆಲ್ಲ ಆಕೆಯ ಅಭಿಮಾನಿಗಳೇ ಆದರು. ನಾನು ತವರೂರಿಗೆ ಹೋದರೆ ಆಕೆಯು ನಮ್ಮೊಟ್ಟಿಗೆ ಸಾಥಿಯಾಗುತ್ತಿದ್ದಳು. ಆಕೆಗೂ ಕಾರಿನಲ್ಲೊಂದು ಸ್ಥಾನ. ಎಲ್ಲೇ ಹೋದರು ಅಲ್ಲಿ ಹೊಂದಿಕೊಂಡು ಹೋಗುವ ಜಾಯಮಾನದವಳು .


ಕಾಲಘಟ್ಟದಲ್ಲಿ ನಮ್ಮ ಮೂವರು ಮಕ್ಕಳ ಆಗಮನ ಆಕೆಗೆ ಅಭದ್ರತೆ ಮೂಡಿಸಬಹುದೆಂಬ ಚಿಂತೆ ನಮ್ಮಲ್ಲಿತ್ತು. ಆದರೆ ಆಕೆ ಮೂವರನ್ನು ತನ್ನ ಗೆಳೆಯರಂತೆ ಕಂಡಳು. ತೊಟ್ಟಿಲಲ್ಲಿ ನನ್ನ ಮಗ ಮಲಗಿದ್ದರೆ, ಅದರ ಅಡಿಯಲ್ಲಿಯೇ ಆಕೆ ನಿದ್ದೆ ಹೋಗುತ್ತಿದ್ದಳು. ಕ್ರಮೇಣ ನಮ್ಮ ಸೌಮ್ಯ ಸೌಮ್ಯ ಸ್ವಭಾವದವಳಾದಳು. ದಿನಗಳು ತಿಂಗಳಾಗಿ ವರುಷ ದಶಕವಾಯಿತು. ಕಾರಣಾಂತರಗಳಿಂದ ನಮ್ಮ ವಾಸ ದೂರದ ಕೆನಡಾ ದೇಶಕ್ಕೆ ಸ್ಥಳಾಂತರವಾಯಿತು. ಮನೆ ಮಗಳಾದ

ಸೌಮ್ಯಳನ್ನು ಏನು ಮಾಡುವುದು ?! ಯಾವುದಾದರೂ ವೃದ್ಧ ನಾಯಿಗಳ ಆಶ್ರಮಕ್ಕೋ ಯಾರಿಗಾದರೋ ಕೊಟ್ಟುಬಿಡಿ ಎಂಬ ಉಪದೇಶಗಳು ಬಂದವು. ಅದು ಸಾಧ್ಯವಿಲ್ಲದ ಮಾತು. ಆಗ ಅಭಯಹಸ್ತ ತೋರಿದ್ದೇ ಬೆಂಗಳೂರಿನ ಎನ್ವಿಸ್ ಪೆಟ್ ರೀಲೊಕೇಶನ್ ( Anvisinc.com ) . ಇದರ ಮುಖ್ಯಸ್ಥ ಆನಂದ್ ವಿಶ್ವನಾಥ್ ಸರಳ ಸಜ್ಜನಿಕೆಯ ಸ್ವತಹ ಪ್ರಾಣಿ ಪ್ರಿಯ. ಜೇಬು ತುಂಬಿಸುವ ಇಂಜಿನಿಯರ್ ಹುದ್ದೆ ಬಿಟ್ಟು ಪ್ರಾಣಿ ಮತ್ತು ಅದರ ಪೋಷಕರಿಗೆ ಎಲ್ಲ ರೀತಿಯ ಮಾರ್ಗದರ್ಶಕರಾಗಿ ಬೆಂಬಲವಾಗಿ ಸಹಾಯ ಮಾಡಲು ಎನ್ವಿಸ್ ಸಂಸ್ಥೆಯನ್ನು ಹುಟ್ಟುಹಾಕಿದರು. ಮೊದಲು ಕೇವಲ ಸಾಕು ನಾಯಿಗಳನ್ನು ಹೇಗೆ ವಾಯುವಿಹಾರ ಮಾಡಿಸಬೇಕು ಎಂದು ತರಬೇತಿ ನೀಡುತ್ತಿದ್ದ ಸಂಸ್ಥೆ, ಈಗ ಪೋಷಕರ ಅನುಪಸ್ಥಿತಿಯಲ್ಲಿ ತಾತ್ಕಾಲಿಕ ವಸತಿ, ಸಾಕುಪ್ರಾಣಿಗಳ ಸಂಪೂರ್ಣ ಆರೈಕೆ ತರಬೇತಿ ಪೋಷಣೆ ಮತ್ತು ವಿದೇಶ ಸಾಗಾಣಿಕೆಯ ಸೌಕರ್ಯವನ್ನೂ ಒದಗಿಸುತ್ತಿದೆ.

ನಾವು ಕೆನಡಾಕ್ಕೆ ಬಂದಾಗ ಚಳಿಗಾಲ ಪ್ರಾರಂಭವಾಗಿತ್ತಷ್ಟೆ. ಮನೆಯ ಮಾಲೀಕ ಅಪ್ಪಟ ಶ್ವಾನ - ದ್ವೇಷಿ. ಶ್ವಾನ ಪ್ರಿಯ ಮನೆ ಹುಡುಕುತ್ತಾ ಇರುವಾಗ ಅತ್ತ ಬೆಂಗಳೂರಿನಲ್ಲಿ ಎನ್ವಿಸ್ ಸೌಮ್ಯಳ ವಿಮಾನ ಯಾನ ಪ್ರಕ್ರಿಯೆ ಪ್ರಾರಂಭಿಸಿತು. ಮುಂದಿನೆರಡು ತಿಂಗಳಲ್ಲಿ ಸೌಮ್ಯ ಸುಮಾರು 23 ಗಂಟೆಗಳ ವೈಮಾನಿಕ ಪ್ರಯಾಣವನ್ನು ಮಾಡಲು ದೈಹಿಕವಾಗಿ ಶಕ್ತಳು ಎಂದು ಹಸಿರು ನಿಶಾನೆ ಸಿಕ್ಕಿತು. ಶ್ವಾನ ಪಾಲಕರಾದ ನಮಗೆ ಅದೇನೋ ಹಿಂಜರಿಕೆ. ಆಕೆ ಒಬ್ಬಳೇ ಬಂದಲ್ಲಿ ದಾರಿಯ ಮಧ್ಯೆ ಏನಾದರೂ ಹೆಚ್ಚುಕಮ್ಮಿಯಾದರೆ ?! ಮೂಕ ಪ್ರಾಣಿಯವಳು. ನಮ್ಮ ಆತಂಕ ಎನ್ವಿಸ್ ರಲ್ಲಿ ಬಿತ್ತರಿಸಿದೆವು. ಆಗ ಸ್ವತಃ ಆನಂದ್ ವಿಶ್ವನಾಥರು ಆಕೆಯನ್ನು ಬೆಂಗಳೂರಿನ ಮನೆಯಿಂದ ಪಡೆದು ಒಟ್ಟಿಗೆ ಟೊರೊಂಟೊಕ್ಕೆ ಪ್ರಯಾಣ ಬೆಳೆಸಿದರು. ಹೆಜ್ಜೆಹೆಜ್ಜೆಗೆ ನಮಗೆ ಸಂದೇಶ ರವಾನೆ ಮಾಡುತ್ತಾ ಆಗಾಗ ಅದರ ಛಾಯಾಚಿತ್ರಗಳನ್ನು ಕಳಿಸುತ್ತಾ ಅವರು ನಮ್ಮ ಆತಂಕವನ್ನು ದೂರ ಮಾಡಿದರು. ಜವಾಬ್ದಾರಿಯುತ ವ್ಯಕ್ತಿಯೊಡನೆ ಸಾಗರಗಳನ್ನು ದಾಟಿ ಅರ್ಧ ಸುತ್ತು ಭೂಮಿಯನ್ನು ಆಕೆ ಕ್ರಮಿಸಿದಳು . ಮನೆಮಗಳು ಸುರಕ್ಷಿತವಾಗಿ ಬಂದು ತಲುಪಿದಳು. ಬೆಂಗಳೂರಿನಿಂದ ಟೊರೊಂಟೊಕ್ಕೆ ಬಂದ ಶ್ವಾನಗಳ ಪಾಲಕರ ಬಳಗವನ್ನು ಆನಂದ್ ವಿಶ್ವನಾಥರು ನಮಗೆ ಪರಿಚಯಿಸಿದರು. 14 ವರ್ಷದ ಸೌಮ್ಯಳ ಪ್ರತಿ ಹುಟ್ಟುಹಬ್ಬಕ್ಕೆ ಎನ್ವಿಸ್ ಸಂಸ್ಥೆ ಕೋರುವ ಪ್ರೀತಿಯ ಹಾರೈಕೆ ನಮಗೆ ವಿಶೇಷ. ಆಕೆಗೆ ಇಲ್ಲಿಯ ಹಿಮ ಬಹಳ ಇಷ್ಟ. ಇಲ್ಲೂ ಆಕೆಯ ಹಲವು ಶ್ವಾನ ಗೆಳೆಯರಿದ್ದಾರೆ. ಬೆಂಗಳೂರಿನ ಗೆಳೆಯರಿಗಿಂತ ಕೊಂಚ ಭಿನ್ನ. ತಳ್ಳುಗಾಡಿಯಲ್ಲಿ ಬರುವ ವ್ಯಾಪಾರಿಗಳಿಲ್ಲ. ಗುಬ್ಬಿ, ಅಳಿಲು, ರಕೂನ್ ಮತ್ತು ಸ್ಕಂಕಗಳ ಲೋಕ. ಜೊತೆಗೆ ಪ್ರೀತಿಸುವ ಕುಟುಂಬ. ಸೌಮ್ಯ ಪುಣ್ಯ ಮಾಡಿದ್ದಳೋ ಎನ್ನುವುದಕ್ಕಿಂತ ಅವಳ ಪ್ರೀತಿಯನ್ನು ಪಡೆದ ನಾವು ಭಾಗ್ಯಶಾಲಿಗಳು ಎನ್ನುವುದೇ ಸಮಂಜಸ.

- ಸಹನಾ ಹರೇಕೃಷ್ಣ
ಟೊರೊಂಟೊ, ಕೆನಡಾ


Submitted by: Sahana Harekrishna
Submitted on: Tue Mar 22 2022 07:09:27 GMT+0530 (IST)
Category: Story
Acknowledgements: This is Mine. / Original
Language: ಕನ್ನಡ/Kannada
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Story, ಕನ್ನಡ/Kannada, This is Mine. / Original]

No comments:

Post a Comment