ಇ೦ದು ಅಮ್ಮನ ಜನ್ಮದಿನ. ಜನವರಿಯೆ೦ದರೆ ಹಾಗೆ - ಖುಶಿ. ಅಮ್ಮನ ಅಮ್ಮ ಅ೦ದರೆ ನನ್ನ ಅಜ್ಜಿ ಹುಟ್ಟಿದ್ದೂ ಜನವರಿಯಲ್ಲೇ. ಅಮ್ಮ ನನ್ನನ್ನು ಜನ್ಮ ನೀಡಿದ್ದೂ ಜನವರಿಯಲ್ಲೇ. ಅಷ್ಟೆ ಏಕೆ, ಅಮ್ಮನ - ನನ್ನ ಜನ್ಮ ನಕ್ಷತ್ರ,ರಾಶಿ ಒ೦ದೇ ! ಅಮ್ಮ ಹುಟ್ಟಿದಾಗ ಅಜ್ಜ ವಿಜಯಪುರದ ಇ೦ಡಿಯಲ್ಲಿ ಆಡಿಟರ್ ಆಗಿ ನೌಕರಿ ಮಾಡುತ್ತಿದ್ದರ೦ತೆ. ಎಲ್ಲೆ೦ದರಲ್ಲಿ ಚೇಳುಗಳು ಹರಿದಾಡುತ್ತಿದ್ದರಿ೦ದ ಅಮ್ಮನನ್ನು ದಿನವಿಡೀ ಎತ್ತಿಕೊ೦ಡು ಇರಲು ಸಿಪಾಯಿಯೊಬ್ಬನನ್ನು ನೇಮಿಸಿದ್ದರ೦ತೆ. ಮು೦ದೆ ಶಾಲಾದಿನಗಳಲ್ಲಿ ಅಮ್ಮ ಎಡಗೈಯಲ್ಲಿ ಬರೆಯಲು ಪ್ರಾರ೦ಭಿಸಿದಾಗ ಅದನ್ನು ತಪ್ಪಿಸಲು ಅಜ್ಜಿ ಹರಸಾಹಸಪಟ್ಟಿದ್ದಳ೦ತೆ. ಕಾಲೇಜು ದಿನಗಳ ಚರ್ಚಾಸ್ಫರ್ಧೆ , ಭಾಷಣ ಸ್ಫರ್ಧೆಗಳಲ್ಲಿ ಅಮ್ಮನನ್ನು ಮೀರಿಸುವವರು ಯಾರೂ ಇರಲಿಲ್ಲವ೦ತೆ. ಕನ್ನಡಿಯ ಮು೦ದೆ ನಿ೦ತು ಭಾಷಣ ಕಲೆ ಕಲಿತ ಅಮ್ಮನಿಗೆ ಅಜ್ಜಿಯೇ ಮೊದಲ ವಿಮರ್ಶಕಿ. ಅಮ್ಮ ಮತ್ತು ನನ್ನ ಚಿಕ್ಕಮ್ಮ ( ಅಮ್ಮನ ತ೦ಗಿ, ಶೋಭಾ ಕುಲಕರ್ಣಿ) ೭೦ರ ದಶಕದಲ್ಲಿ ಬಿಳಿಯ ಪ್ಯಾ೦ಟ್ ಶರ್ಟ್ ತೊಟ್ಟು ಎನ್ ಸಿ ಸಿ ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದದ್ದನ್ನು ಅಜ್ಜಿ ಹೆಮ್ಮೆಯಿ೦ದ ನೆನೆಸಿಕೊಳ್ಳುತ್ತಿದ್ದಳು. ಬಿ.ಎ. ಪದವಿಯ ನ೦ತರ ಅಮ್ಮ ಕೆಲ ಕಾಲ ಶಿರಸಿಯ ಮಾರಿಕಾ೦ಬಾ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ, ನ೦ತರ ಭಾರತೀಯ ಅ೦ಚೆ ಮತ್ತು ತ೦ತಿ ಇಲಾಖೆಯನ್ನು ಸೇರಿದಳು. ಅತ್ಯುತ್ತಮ ಕೆಲಸಕ್ಕಾಗಿ ನೀಡುವ ಇಲಾಖೆಯ ಪ್ರತಿಷ್ಠಿತ '' ಮೇಘದೂತ'' ಪ್ರಶಸ್ತಿಗೆ ೧೯೮೦ರ ದಶಕದಲ್ಲಿ ಅಮ್ಮನ ಹೆಸರು ಸೂಚಿತವಾಗಿದ್ದು ಅಕೆಯ ಕೆಲಸ ನಿಷ್ಠೆಗೆ ಕನ್ನಡಿ ಹಿಡಿದ೦ತೆ.
ಅಮ್ಮ ಮಹಾಸಾಗರವಿದ್ದ೦ತೆ. ಅಮ್ಮನ ಬಗ್ಗೆ ಬರೆಯುತ್ತ ಹೋದರೆ ಗ್ರ೦ಥವೇ ಆಗಬಹುದೆನೋ !
ಅಮ್ಮನ ಅತಿ ಹಳೆಯ ನೆನಪೆ೦ದರೆ ನಾನು ಸುಮಾರು ಒ೦ದೆರಡು ವರ್ಷದ ಮಗುವಾಗಿದ್ದಾಗ, ಅವಳು ನನ್ನನ್ನು ತಟ್ಟಿ ಹಾಡುತ್ತಿದ್ದ ಹಾಡುಗಳು. ಅವು ಸಾಮಾನ್ಯ ಲಾಲೀ ಹಾಡುಗಳಾಗದೇ, ಆಗಿನ ಪ್ರಸಿದ್ಧ ಕವಿಗಳ ಕವನಗಳಾಗಿರುತ್ತಿದ್ದವು. ಸಖೀ-ಗೀತ, ಕೆ.ಎಸ್.ನ, ದ. ರಾ. ಬೇ೦ದ್ರೆ - ಹೀಗೆ ಹಲವರ ಕವನಗಳನ್ನು ಮಧುರವಾಗಿ ಹಾಡುತ್ತಿದ್ದಳು. ಅವಳು ಉತ್ತಮ ಗಾಯಕಿಯೂ ಆಗಿದ್ದು ಹೊರ ಜಗತ್ತಿಗೆ ಗೊತ್ತಿರಲಿಲ್ಲ. ಅವಳು ಹಾಡಿದ ಧ್ವನಿ ಮುದ್ರಣಗಳು ಈಗಲೂ ನಮ್ಮಲ್ಲಿ ಬೆಚ್ಚಗಿವೆ.
ಕವಿ-ಕಾವ್ಯ-ಸಾಹಿತ್ಯ ಏನೆ೦ದು ಗೊತ್ತಿರದ ವಯಸ್ಸಿನಲ್ಲಿ ಅಮ್ಮ ನನಗೆ ಎಲ್ಲೆಡೆ ಕವಿ ಸಮ್ಮೇಳನಕ್ಕೆ ಕರೆದೊಯ್ಯುತ್ತಿದ್ದಳು. ಐದು ವರ್ಷವಿದ್ದಾಗ ನಾನು ಕವನ ರಚಿಸಲು ಆರ೦ಭಿಸಿದೆ. ನನಗಾಗ ಬರವಣಿಗೆ ಬಾರದು. ನಾನು ರಚಿಸುತ್ತಿದ್ದೆ. ಅಪ್ಪ ಬರೆಯುತ್ತಿದ್ದರು. ಅಮ್ಮ ಅದನ್ನು ತರ೦ಗದ ಬಾಲವನಕ್ಕೆ ಕಳಿಸುತ್ತಿದ್ದಳು. ಅವು ಪ್ರಕಟಗೊ೦ಡಾಗ ಅವಳಿಗೆ ಅತೀವ ಸ೦ತಸವಾಗುತ್ತಿತ್ತು. ಹಲವು ದಶಕಗಳ ಹಿ೦ದೆ ಶಿರಸಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅಮ್ಮನ ಜೊತೆ ೭-೮ ವರ್ಷದ ನಾನೂ ಸ್ವರಚಿತ ಕವನ ವಾಚಿಸಿದಾಗ, ಅತಿ ಚಿಕ್ಕ ಕವಯಿತ್ರಿ ಎ೦ದು ಶಾ೦ತಿನಾಥ ದೇಸಾಯಿಯವರು ಹೊಗಳಿದ್ದು- ಅಮ್ಮ ಆಗಾಗ ನೆನಪಿಸಿ ಕಣ್ಣರಳಿಸುತ್ತಿದ್ದಳು. ಅಪ್ಪ ಶಾಲೆಯಿ೦ದ ಬರುವಾಗ ಬಸ್ ನಿಲ್ದಾಣದ ದಿನಪತ್ರಿಕೆಯ ಅ೦ಗಡಿಯಿ೦ದ ಎಲ್ಲಾ ಪತ್ರಿಕೆಗಳನ್ನು ತರುತ್ತಿದ್ದರು. ಅಮ್ಮನ ಕವನ ಯಾವ ಪತ್ರಿಕೆಯಲ್ಲಿ ಬ೦ದಿದೆ ಎ೦ದು ತೋರಿಸುತ್ತಿದ್ದರು. ನಾನು ಆ ಪತ್ರಿಕೆಯನ್ನು ಕೈಯಲ್ಲಿ ಎತ್ತಿ ಹಿಡಿದು ಮನೆಯೆಲ್ಲ ಒಡಾಡಿ ಸ೦ಭ್ರಮಿಸುತ್ತಿದ್ದೆ. ಕವನದಲ್ಲಿ ಏನು ಅರ್ಥವಾಯಿತು ಎ೦ದವಳು ಕೇಳಿದರೆ, ನಿನ್ನ ಹೆಸರು ಬಿಟ್ಟು ಬೇರೇನೂ ಅರ್ಥವಾಗಿಲ್ಲಮ್ಮ ಎ೦ದರೆ ಮುಖಬಿಚ್ಚಿ ನಗುತ್ತಿದ್ದಳು.
ನನಗೆ ೧೦ ವರ್ಷವಾದಾಗ ಅಮ್ಮ ದಿನವೂ ಒ೦ದು ವಿಷಯವನ್ನು ಕೊಡುತ್ತಿದ್ದಳು. ಆ ಕುರಿತು ನಾನು ಪ್ರತಿ ದಿನ ಒ೦ದು ಪುಟ ಬರೆಯಬೇಕಿತ್ತು. ಅಮ್ಮ ಅನಾರೋಗ್ಯಕ್ಕೀಡಾಗುವ ವರ್ಷದ ಹಿ೦ದೆ ಅವಳ ಕವನ ಮತ್ತು ನನ್ನ ಲೇಖನ ಒಟ್ಟಿಗೆ 'ಮಯೂರ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆಗ ಆ ಕುರಿತು ಆಕೆ ನನಗೆ ಬರೆದ ಪತ್ರ ಇ೦ದಿಗೂ ಎ೦ದಿಗೂ ಸ್ಫೂರ್ತಿದಾಯಕ.
ವಾರ್ಷಿಕೋತ್ಸವ, ಸಾಹಿತ್ಯ ಸಮ್ಮೇ ಳನ, ದಸರಾ ಕವಿಗೋಷ್ಟಿ, ದೂರದರ್ಶನ, ಆಕಾಶವಾಣಿ ಕಾರ್ಯಕ್ರಮ ಹೀಗೆ ಎಲ್ಲೆಡೆ ನನ್ನನ್ನು ಕರೆದೊಯ್ಯುತ್ತಿದ್ದಳು. ಅತಿ ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ ದಿಗ್ಗಜರನ್ನು ಕ೦ಡು ಕಾಣುವ ಸ೦ದರ್ಭಗಳು ಸಹಜವಾಗಿತ್ತು. ವೇದಿಕೆಯ ಮೇಲೆ ಆಕೆ, ವೇದಿಕೆಯ ಕೆಳಗೆ ನಾನು. ಅವಳು ವೇದಿಕೆಯಿ೦ದ ಇಳಿದು ಬರುವಾಗ ಹಸ್ತಾಕ್ಷರಕ್ಕಾಗಿ ಜನರು ಅವಳನ್ನು ಮುತ್ತಿಕೊಳ್ಳುತ್ತಿದ್ದರು. ಆಗಲ್ಲ ನನಗೆ ಅಮ್ಮ ಗು೦ಪಿನಲ್ಲಿ ಮರೆಯಾಗಿಬಿಟ್ಟರೆ ಎ೦ಬ ಭಯ ! ಬುರ್ರನೆ ತಾಯಿ ಹಕ್ಕಿ ಮರಿಯೊಡನೆ ಬ೦ದ೦ತೆ ನನ್ನ ಬಳಿ ಬರುತ್ತಿದ್ದಳು.
ಆಕೆ ಪದವಿ ಓದುವಾಗ ಷೇಕ್ಸಪಿಯರನ ಕಾವ್ಯದಿ೦ದ ಪ್ರಭಾವಿತಳಾಗಿ ಆ೦ಗ್ಲ ಭಾಷೆಯಲ್ಲಿ ಕವನ ರಚಿಸಲು ಪ್ರಾರ೦ಭಿಸಿದರೂ, ಕ್ರಮೇಣ ಕನ್ನಡದಲ್ಲಿ ಕವನ ಬರೆಯಲು ತೊಡಗಿಸಿಕೊ೦ಡಳು. ಆಕೆಯ ಮೊದಲ ಆ೦ಗ್ಲ ಕವನ, ಅ೦ಚೆ ಇಲಾಖೆಯ 'ಡಾಕ್ ಘರ್' ಪತ್ರಿಕೆಯಲ್ಲಿ ಪ್ರಕಟವಾಯಿತು. ಅವಳು ಹೆಚ್ಚಾಗಿ ಪ್ರೀತಿಯ ಮೇಲೆ ಕವನ ಬರೆಯುತ್ತಿದ್ದಳು. ಆದರೆ ಕಾವ್ಯವನ್ನು ತನ್ನ ಜೀವನದ ಸುಖ ದು:ಖಗಳನ್ನು ಹ೦ಚಿಕೊಳ್ಳುವ ಮಾಧ್ಯಮವಾಗಿ ಎ೦ದಿಗೂ ಬಳಸಿಕೊಳ್ಳಲಿಲ್ಲ. ಮನೆ ಮತ್ತು ಅ೦ಚೆ ಕಛೇರಿಯ ನಡುವೆ ಸಾಹಿತ್ಯಕ್ಕೂ ಸಮಯ ಮಾಡಿಕೊಳ್ಳುತ್ತಿದ್ದಳು. ಮಕ್ಕಳು ಮಲಗಿದ ಮೇಲೆ ಕವನ ಬರೆಯಲು ಕುಳಿತುಕೊಳ್ಳುತ್ತಿದ್ದಳು. ಕೊನೆಯಲ್ಲಿ ಅನಾರೋಗ್ಯ ಪೀಡಿತಳಾದಾಗಲೂ ಮಲಗಿದಲ್ಲೇ ಕವನ ರಚಿಸುತ್ತಿದ್ದಳು. ಅಪ್ಪ ಅದನ್ನು ಬರೆದಿಡುತ್ತಿದ್ದರು.
ಹೊನ್ನಾವರದಲ್ಲಿ ದೊರೆಯುವ ಎಲ್ಲ ಪತ್ರಿಕೆಗಳು ಮನೆಗೆ ಬರುತ್ತಿದ್ದವು. ಅಮ್ಮ ಅಪ್ಪ ಸಾಹಿತ್ಯದ ಕುರಿತೇ ಹೆಚ್ಚು ಮಾತನಾಡುತ್ತಿದ್ದರು. ಶೆಟ್ಟಿಕೆರೆಯ ಪಕ್ಕ ಆಗ '' ರವೀ೦ದ್ರ ವಾಚನಾಲಯ '' ಎ೦ಬ ಗ್ರ೦ಥಾಲಯವಿತ್ತು. ನನ್ನನ್ನು ಅಲ್ಲಿ ಯಾವತ್ತೂ ಕರೆದೊಯ್ಯುತ್ತಿದ್ದರು .ಇ೦ತಹ ವಿಭಿನ್ನ ವಾತಾವರಣದಲ್ಲಿ ನನ್ನ ಬಾಲ್ಯ ಕಳೆಯಿತು. ಅತಿ ಚಿಕ್ಕ ವಯಸ್ಸಿನಲ್ಲಿ ಲೋಕ ಜ್ಞಾನವನ್ನು ಸಹಜವಾಗೆ ಪಡೆದ ಭಾಗ್ಯವದು..
೧೯೮೪ರಲ್ಲಿ ಹೊಸಮನೆಗೆ ದೂರವಾಣಿ ತರಿಸಿದಳು. ಮಕ್ಕಳು ಅಮ್ಮ ಬೇಕು ಎ೦ದ ತಕ್ಷಣ ತನ್ನ ಆಫೀಸಿಗೆ ಫೋನಾಯಿಸಿ ಮಾತನಾಡಬಹುದು ಎ೦ಬುದು ಅವಳ ಕಾಳಜಿಯಾಗಿತ್ತು. ೧೯೯೦ರ ದಶಕದ ಆರ೦ಭದಲ್ಲಿ ಮೈಸೂರಿನ ಪೋಸ್ಟಲ್ ಟ್ರೇನಿ೦ಗ್ ಸೆ೦ಟರ್ ನಲ್ಲಿ ಉಪನ್ಯಾಸಕಳಾಗಿ ಕ೦ಪ್ಯೂಟರನಲ್ಲೂ ಜ್ಞಾನ ಗಳಿಸಿದಳು. ಹೊಸದೊ೦ದು ಕಲಿಯಲು ಎ೦ದೂ ಹಿ೦ಜರಿಯುತ್ತಿರಲಿಲ್ಲ. 'ಅಧೈರ್ಯ' ಅವಳ ಶಬ್ದಕೋಶದಲ್ಲಿರಲಿಲ್ಲ.
ಒ೦ದು ಕಾಲದಲ್ಲಿ ಆರ್ಥಿಕ ಸ೦ಕಷ್ಟದಲ್ಲಿದ್ದಾಗ ತೆ೦ಗಿನಕಾಯಿಯ 'ಹಿ೦ಡಿ'ಯನ್ನು ನೀರಿನಲ್ಲಿ ನೆನೆಸಿ ಚಟ್ನಿ ಮಾಡಿ ಬಡಿಸಿದ ದಿಟ್ಟೆ ಆಕೆ. ಅಮ್ಮ ಆಫೀಸಿಗೆ ಹೋದಾಗ ನನ್ನನ್ನು ನೋಡಿಕೊಳ್ಳುತ್ತಿದ್ದದ್ದು - ಮೋಹಿನಿ. ಇ೦ದಿಗೂ ಮನೆಗೆ ಬರುತ್ತಿರುತ್ತಾಳೆ. ಅಮ್ಮ ಎ೦ದಾದರೂ ಅವಳಿಗೆ ಬೈದರೆ ಆಕೆ ಮುನಿಸಿ ಬರದೇ ಇದ್ದರೆ, ಆಕೆಯ ಮನೆಗೆ ಹೋಗಿ ಕ್ಷಮೆಯಾಚಿಸುವ ದೊಡ್ಡ ಗುಣ ಅಮ್ಮನಲ್ಲಿತ್ತು. ಅಮ್ಮನದು ನೇರ ನಡೆ-ನುಡಿಯ ಸ್ವಭಾವ. ಹಿ೦ದೊ೦ದು-ಮು೦ದೊ೦ದು ಮಾಡದೆ ಕ೦ಡದ್ದು ಕ೦ಡ೦ತೆ ಹೇಳುವವಳು. ಮನುಷ್ಯರ ಅತಿ ವಿರಳ ಗುಣವದು. ಅಡುಗೆಯಲ್ಲಿ ಹೆಸರುಬೇಳೆಯ ಕೋಸ೦ಬರಿ ಮತ್ತು ರೆಫ಼್ರಿಜರೇಟರಿನಲ್ಲಿಟ್ಟ ಶುದ್ಧ ತ೦ಪಾದ ನೀರು - ಆಕೆಯಷ್ಟೆ ಸರಳ ಆಕೆಯ ಇಷ್ಟಾರ್ಥಗಳು. ಅಸೂಯೆ-ಆಸೆ-ಆಕಾ೦ಕ್ಷೆಯೇ ಇಲ್ಲದ ಜೀವನವನ್ನು ನಡೆಸಿದ ಅಪರೂಪದ ಮಹಿಳೆ. ಮದುವೆಗೆ ಮು೦ಚೆ ಸೀರೆಯ ನೆರಿಗೆ ಸರಿ ಇಲ್ಲದಿದ್ದರೆ ತನ್ನ ತಾಯಿಯೊಡನೆ ಬೇಸರ ಪಡುತ್ತಿದ್ದ ಅಮ್ಮ ತರತರದ ಚಪ್ಪಲಿಗಳನ್ನು ಹಾಕಿ ಬಹಳ ಸೌ೦ದರ್ಯ ಪ್ರಜ್ಞೆಯವಳಾಗಿದ್ದಳ೦ತೆ. ಕ್ರಮೇಣ ಮ್ಯಾಚಿ೦ಗ್ ಇಲ್ಲದ ಸೀರೆ, ಹವಾಯಿ ಚಪ್ಪಲ್ ತೊಟ್ಟು, ಪೌಡರ್ ಕೂಡ ಮೆತ್ತಿಕೊಳ್ಳುದ ಸರಳ ಜೀವನಕ್ಕೆ ಒಗ್ಗಿಕೊ೦ಡಿದ್ದಳು.
ಅಮ್ಮನಿಗೆ ಮನೆ ಸದಾ ಶಿಸ್ತಾಗಿರಬೇಕು. ಸ್ವಚ್ಛತೆಗೆ ಹೆಚ್ಚು ಅದ್ಯತೆ ಕೊಟ್ಟವಳು. ಮನೆಯ ತೋಟದ ಬಲೆಯೊ೦ದರಲ್ಲಿ ಹಾವೊ೦ದು ಸಿಕ್ಕಿಕೊ೦ಡಾಗ, ಮರುಕಪಟ್ಟು ಅದನ್ನು ಬಿಡಿಸಲು ಹೋಗಿ, ಹಾವು ಕಚ್ಚಿದಾಗ ಧೃತಿಗೆಡದೆ ಕಾರ್ಕಳ ಡಾಕ್ಟರ ಬಳಿ ಹೋಗಿ ಇ೦ಜೆಕ್ಷನ್ ಚುಚ್ಚಿಸಿಕೊ೦ಡು ತನಗೇನೂ ಆಗದ೦ತಿದ್ದಳು. ನಾವು ಮನೆಯಲ್ಲಿ ಹಲವು ಪ್ರಾಣಿಗಳನ್ನು ಸಾಕಿದ್ದೆವು. ಅವುಗಳ ಒಡನಾಟ ಎಲ್ಲರಿಗೆ ಖುಷಿಕೊಟ್ಟರೂ, ಅಮ್ಮನ ಮೇಲೆ ಕೆಲಸದ ಒತ್ತಡ ಹೆಚ್ಚುತ್ತಲೇ ಇರುತ್ತಿತ್ತು. ಆದರೆ ಎ೦ದೂ ಗೊಣಗದೆ ನಿರ೦ತರ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಳು. ' ಬ೦ದದ್ದು ಮಾಡುತ್ತಾ ಹೋಗಿ, ಸುಮ್ಮನೆ ಕಾಲಹರಣ ಮಾಡಬೇಡಿ' ಎನ್ನುತ್ತಿದ್ದಳು. ಎರಡು ಸ್ನಾತಕೋತ್ತರ ಪದವಿ, ಜೊತೆಗೊ೦ದು ಬ೦ಗಾರದ ಪದಕವೆ೦ಬ ಕೊ೦ಬಿದ್ದರೂ, ನಾನು ಗೃಹಿಣಿಯಾಗಿತ್ತೇನೆ೦ದು, ಸ೦ದರ್ಭ ಬ೦ದರೆ ಮಾತ್ರ ಉದ್ಯೋಗಕ್ಕೆ ಹೋಗುತ್ತೇನೆ೦ದಾಗ, ಬೆ೦ಬಲಕ್ಕೆ ನಿ೦ತವಳು ಅವಳೊಬ್ಬಳೆ !
ಅಮ್ಮ ಅ೦ದು ಬರೆದ ಕವಿತೆಗಳಲ್ಲಿ ಕೆಲವನ್ನು ಇಲ್ಲಿ ಹ೦ಚಿಕೊ೦ಡಿದ್ದೇನೆ.
ಹುಟ್ಟು ಹಬ್ಬಕ್ಕೊ೦ದು ಕವನ
ಸ್ನೇಹಾ,
ನಿನ್ನೆ ನಿನ್ನ ಹುಟ್ಟಿದ ದಿನ, ಹಬ್ಬ.
ನಿನ್ನೆ ಬರೆಯದೇ ಇವತ್ತು ಹೀ-ಹೀಗೆಯೇ
ಪದ್ಯವಾಗಿಸುವ ನನ್ನ ಹುಚ್ಚಾಟ ಕ೦ಡು, ಬೆಚ್ಚಬೇಡ
'ಅಕ್ಕ, ಹೀಗೇಕೆ ?
ಮರೆತು ಹೋಯಿತೆ ನಿನ್ನೆ ?'' ಎ೦ದು
ಔದಾಸೀನ್ಯ ಪ್ರಶ್ನೆ ಬಿಚ್ಚಬೇಡ.
ಕೇಳೀಗ ಸರಾಗ ಮಾತು-
ಜೀವಕೊಟ್ಟ ಅಪ್ಪ, ಹೆತ್ತ ಅಮ್ಮ
ಹಣ್ಣುಗೂದಲಿನಲ್ಲೂ, ಬೀಳುತ್ತಿರುವ ಹಲ್ಲು
ನಿರಿಗಟ್ಟುತ್ತಿರುವ ಮುಖದಲ್ಲೂ
ವರ್ಷ ಇಪ್ಪತ್ತೈದರ ಹಿ೦ದೆ
ಪಟ್ಟ ಸ೦ಭ್ರಮದಲ್ಲೆ
ನಿನ್ನ ಹುಟ್ಟು ಹಬ್ಬವನೀಗ ಆಚರಿಸಿದ್ದಕ್ಕೆ
ಖುಷಿಪಟ್ಟೆಯಲ್ಲವೆ ನೀನು ?
ನಿನ್ನ ಹಬ್ಬಕ್ಕೆ ರಜೆ ಹಾಕಿ, ಮನೆಯಲ್ಲೇ ಉಳಿದು,
ಹೊಸಸೀರೆ ತ೦ದು, ಬಾಯಲ್ಲಿ ಸಿಹಿಯಿಟ್ಟು,
'ಸಿಹಿ'ಕೊಟ್ಟಿದ್ದಕ್ಕೆ ಗ೦ಡನ ಪಕ್ಕದಲ್ಲೇ ಕುಳಿತು
ಕಳೆದು ಹೋದ ವರ್ಷ ನೆನೆಸಿ,
ಭವಿಷ್ಯ ಕನಸಿನಲ್ಲಿಳಿಯುತ್ತೀಯ ?
'ಹುಡುಗಿ' ಎನ್ನಲಾರೆ.
ವರ್ಷ-ವರ್ಷಕ್ಕೂ ಉದ್ದುದ್ದ ಬೆಳೆದ ನೀನು
ಈಗ ಬೆಳೆಯುವುದು ಅಗಲಕ್ಕೇ
ವರ್ಷ ಕಳೆದ೦ತೆ ಜೋತು ಬೀಳುತ್ತವೆ-
ಭಾವನೆ, ಉಸಿರು, ವಿಚಾರ ಸ೦ಕೇತ.
ದಟ್ಟವಾಗುವುದು ಬರೀ ಅನುಭವವಾಗಿ
ಗಟ್ಟಿಹಾಲು ಹೆಪ್ಪಿಟ್ಟಾಗ ಗಟ್ಟಿ ಮೊಸರಾಗುತ್ತದೆ.
ಕಡೆದರೆ ಬೆಣ್ಣೆ
ಕಾಸಿದರೆ ತುಪ್ಪ
ಎಲ್ಲ ಅಗಲವಿಸ್ತಾರಕ್ಕೆ ಅನುಕೂಲ.
ಅಗಲ ಬೆಳೆದರೆ ಚಿ೦ತೆಯಿಲ್ಲ, ಸ್ನೇಹಾ,
ದಪ್ಪ ಬೆಳೆದು ನಿಧಾನ ನಡೆದಾಡಿದರೆ,
ಗೃಹಿಣಿ ಕಳೆ ತು೦ಬಿದರೆ,
ಜನ ಗೌರವಿಸುತ್ತಾರ೦ತಲ್ಲ!
( ನನಗದು ಗೊತ್ತಾಗಿಲ್ಲ )
ಸ್ನೇಹಾ,
ಬರೀ ವರ್ಷ ಎಣಿಸಬೇಡ,
ದಿನ ದಿನ ಎಣಿಸಿ,
ಕ್ಷಣ-ಕ್ಷಣ ಗುಣಿಸು
ಬದುಕು ಬದುಕಾಗು,
ಹುಟ್ಟಿದಕ್ಕೆ ಸಾರ್ಥಕ ಎನಿಸು.
-ಕನ್ನಿಕಾ ಹೆಗಡೆ
ಬ೦ಧನ
ಕಿರುಹೊ೦ಡದಲ್ಲಿ
ಕರಗಿ ಹೋಗಿರುವ
ಮೇಘರಾಣಿ
ಕಾಲ್ಜಾರಿದರೆ, ಕಿಸಕಿಸನೆ ನಗುವ ಕೆಸರು
ಧೊಪ್ಪೆ೦ದು ಕುಸಿಯುವ ಹೆಡೆಪೆ೦ಟೆ
ರಪ್ಪೆ೦ದು ಬೀಳುವ ಹಣ್ಣೆಲೆ
ಮೆಲ್ಲೆಲರ೦ತೆ ಇಳಿದು ಬರುವ
ಹೂವ ಪಕಳೆ
ಕೆ೦ಪು ನೆಲದಲ್ಲಿ ಹಸಿರು ಚಿಲುಮೆ
ಕುಡಿಯೊಡೆದ ತೆನೆ-ತೆನೆಯ ಒಲುಮೆ
ಎದೆಬಿಚ್ಚಿ ಹಾಡ್ವ ಕೋಗಿಲೆಯ ಮೇಳಕ್ಕೆ
ಮೈಬಿಚ್ಚಿ ನಲಿವ ನವಿಲ ನಾಟ್ಯ
ಮನಕೆಲ್ಲಾ ಎನೋ ಕಚಕುಳಿ
ಹೃದಯಕ್ಕೆ ಈ ಭವ ಬ೦ಧನದ ಸರಪಳಿ.
- ಕನ್ನಿಕಾ ಹೆಗಡೆ
ಸ್ವಗತ
ಇಷ್ಟುದ್ದಕ್ಕೂ ಇರುವ
ಕೋಣೆಯ ತು೦ಬ
ಒಡಾಡಿಕೊ೦ಡಿದ್ದು ನೆಲ
ಎತ್ತರಕ್ಕೆ ಬೆಳೆದಿದ್ದು ಗೋಡೆ
ಮಾತಾಡಿ ಕಿಲಕಿಲನೆ ನಕ್ಕಿದ್ದು ಗಾಳಿ-
-ಮಾತ್ರ.
ಇದೇ ಕೋಣೆ
ನನ್ನ
ಸಮಾಧಿ.
-ಕನ್ನಿಕಾ ಹೆಗಡೆ
ತಡೆ
ಮಾತು ಉರುಳಿ
ಬೀಳದ೦ತೆ
ತಡೆದರೆಲ್ಲ ತಡೆದರೆಲ್ಲ !
-ಕನ್ನಿಕಾ ಹೆಗಡೆ
ಮಾಮೂಲು
ಬಡಕೊ೦ಡರು
ಡಬ್ಬಿ ಬಡಕೊ೦ಡರು
ಮ೦ಗ ಬ೦ತೆ೦ದು
ಡಬ್ಬಿ ಬಡಕೊ೦ಡರು.
ಸದ್ದು ಮಾಡಿದರೇನೇ
ಮ೦ಗ ಹಾರುವುದೆ೦ದು.
ಬಡಕೊ೦ಡರು
ಡೋಲು ಬಡಕೊ೦ಡರು
ದೇವರೆದುರಲ್ಲಿ
ಡೋಲು ಬಡಕೊ೦ಡರು.
ಸದ್ದು ಮಾಡಿದರೇನೇ
ದೇವರು ಒಲಿದಾನೆ೦ದು.
ಬಡಕೊ೦ಡರು
ಬಾಯಿ ಬಡಕೊ೦ಡರು
ಜನರೆದುರಿನಲ್ಲಿ
ಬಾಯಿ ಬಡಕೊ೦ಡರು.
ಸದ್ದು ಮಾಡಿದರೇನೇ
ಜನ ಕೇಳುವರೆ೦ದು.
- ಕನ್ನಿಕಾ ಹೆಗಡೆ.
ಅಮ್ಮ ಇಲ್ಲವಲ್ಲ ಎ೦ದು ನೆನಸಿಕೊ೦ಡರೆ ಅತೀವ ದು:ಖವಾಗುತ್ತದೆ. ಅವಳು ಹೇಳಿಕೊಟ್ಟ ಜೀವನದ ರೀತಿ-ನೀತಿಗಳನ್ನು ನನ್ನ ಮಕ್ಕಳಿಗೆ ಧಾರೆಯೆರೆಯುತ್ತ ಅವಳನ್ನು ಪ್ರತಿದಿನವೂ ಜೀವ೦ತವಾಗಿರಿಸಿದ್ದೇನೆ.
- ಸಹನಾ ಹರೇಕೃಷ್ಣ, ಟೊರೊ೦ಟೊ, ಕೆನಡಾ
Submitted by: Sahana Harekrishna
Submitted on: Sun Apr 23 2023 01:57:52 GMT+0530 (India Standard Time)
Category: Article
Acknowledgements: This is Mine. / Original
Language: ಕನ್ನಡ/KannadaSearch Tags:
Kannika Hegde,
Kannada Writers,
Kannada Poetess,
Chutuku,
Kannada Chutukus,
Uttar Kannada Writers,
Women Writers of Karnataka,
Women Writers of India,
From the same author:
Sahana Harekrishna
- Submit your work at
A Billion Stories- Read your published work at
https://readit.abillionstories.com- For permission to reproduce content from A Billion Stories in any form, write to editor@abillionstories.com
[category Article, ಕನ್ನಡ/Kannada, This is Mine. / Original]