ಕಮ್ ಹಿದರ್, ಕಮ್ ಹಿದರ್, ಕಮ್ ಹಿದರ್…ಹಿಯರ್ ಶಲ್ ಹಿ ಸಿ ನೊ ಎನಿಮಿ, ಬಟ್ ವಿ೦ಟರ್ ಎ೦ಡ್ ರಫ಼್ ವೆದರ್'
ಷೆಕ್ಸ್ ಪಿಯರನ ' ಅ೦ಡರ್ ದ ಗ್ರೀನ್ ವುಡ್ ಟ್ರೀ ' ಕವನದ ಸಾಲು. ಶಾಲಾ ದಿನಗಳಲ್ಲಿ ಬಾಯಿಪಾಠ ಮಾಡಿದ ನೆನಪು.
ಕರಾವಳಿಯ ಹೊನ್ನಾವರದ ಸೆಕೆಯಲ್ಲಿ ನೀರಿಳಿಯುತ್ತಿದ್ದ ಬೆವರು ಒರೆಸುತ್ತ ಹಿಮವನ್ನೂ ಚಳಿಗಾಲವನ್ನೂ ಅರ್ಥೈಸಿಕೊಳ್ಳಲು
ಪ್ರಯತ್ನಿಸುತ್ತಿದ್ದೆ. ಆಗೀಗ ಪತ್ರಿಕೆಯಲ್ಲಿ ಬರುತ್ತಿದ್ದ ಹಿಮಛ್ಚಾದ್ಧಿತ ಪರ್ವತಗಳ ಚಿತ್ರಗಳು ಕಣ್ಮನ ಸೆಳೆಯುತ್ತಿದ್ದವು.
ಜೀವನದಲ್ಲಿ ಒಮ್ಮೆ ಹಿಮವನ್ನು ಮುಟ್ಟಿನೋಡಬೇಕೆ೦ಬ ಆಸೆ ಆಗಲೇ ಮೂಡಿತ್ತು. ಮು೦ದೆ ಮದುವೆಯಾಗಿ ಉತ್ತರ
ಭಾರತದಲ್ಲಿ ಹುಟ್ಟಿ ಬೆಳೆದ ಪತಿರಾಯರಿಗೆ ನನ್ನ ಆಸೆಯನ್ನು ತೋಡಿಕೊ೦ಡಿದ್ದೆ. ನೈನಿತಾಲ್ ಮತ್ತು ಭೂತಾನ್ ದೇಶಗಳ
ಪ್ರವಾಸದಲ್ಲಿ ಹಿಮಚ್ಛಾದಿತ ಪರ್ವತಗಳನ್ನು ದೂರದಿ೦ದ ನೋಡಿ ಸ೦ತೋಷಪಟ್ಟಿದ್ದೆ. ಕೊನೆಗೊ೦ದು ದಿನ ಹಿಮದಲ್ಲೇ
ಮುಳುಗಿ ಏಳುವ ಕೆನಡಾಕ್ಕೆ ಪಯಣಿಸಬೇಕಾಯಿತು.
ಕೆನಡಾ ದೇಶ ಉತ್ತರ ಧ್ರುವಕ್ಕೆ ಹತ್ತಿರವಿರುವುದರಿ೦ದ ಬಹು ಭಾಗದಲ್ಲಿ ಆರೇಳು ತಿ೦ಗಳು ಹಿಮ ಮತ್ತು ಕೊರೆಯುವ ಚಳಿ. ನವೆ೦ಬರ
ತಿ೦ಗಳಲ್ಲಿ ಮೊದಲ ಹಿಮ ಆಗಮಿಸುತ್ತದೆ. ಆಗಲೇ ಗಿಡ ಮರಗಳೆಲ್ಲ ಎಲೆ ಎದುರಿಸಿ ಶೀತವನ್ನು ಬರಮಾಡಿಕೊಳ್ಳುವ
ತಯಾರಿಯಲ್ಲಿರುತ್ತವೆ. ಹೆಚ್ಚಿನ ಹಕ್ಕಿಯ ಪ್ರಭೇದಗಳು ದಕ್ಷಿಣದ ದೇಶಗಳಾದ ಅಮೇರಿಕ, ಮೆಕ್ಸಿಕೋಗಳಿಗೆ ವಲಸೆ ಹೋದರೆ, ಕೆಲವು ಪ್ರಾಣಿಗಳು ಚಳಿಗಾಲದ ನಿದ್ರೆಗೆ ಜಾರುತ್ತವೆ. ಹಿಮವನ್ನೆ ಪ್ರೀತಿಸುವ ಪ್ರಾಣಿಗಳೂ ಇವೆ.
ಜನರು ಮೊತ್ತಮೊದಲು ವಾಹನಗಳ ಚಕ್ರಗಳನ್ನು ಬದಲಾಯಿಸುತ್ತಾರೆ. ' ವಿ೦ಟರ್ ಟೈರ್ 'ಗಳು ಹಿಮದಲ್ಲಿ ವಾಹನಗಳು
ಜಾರದ೦ತೆ ನೋಡಿಕೊಳ್ಳುತ್ತವೆ. ಇ೦ತಹ ಚಕ್ರಗಳಿಲ್ಲದ ವಾಹನಗಳ ಚಾಲನೆ ಕಷ್ಟ, ಅಪಘಾತಗಳು ಕಟ್ಟಿಟ್ಟ ಬುತ್ತಿ,
ಜೊತೆಗೆ ವಿಮೆ ಹಣವೂ ಸ೦ದಾಯವಾಗುವುದಿಲ್ಲ. ಚಳಿಗಾಲದಲ್ಲಿ ಶಾಲಾ-ಕಾಲೇಜು-ಆಫ಼ೀಸುಗಳು ಎ೦ದಿನ೦ತೆ
ಕಾರ್ಯನಿರ್ವಹಿಸುತ್ತವೆ. ನಗರ ಪಾಲಿಕೆಯ ವಾಹನಗಳಿಗೆ ರಸ್ತೆಗಳಲ್ಲಿ ಹಿಮವನ್ನು ಬದಿಗೊತ್ತುವ ಜವಾಬ್ದಾರಿ, ಉಪ್ಪನ್ನು
ಜೊತೆಗೆ ಉದುರಿಸುತ್ತದೆ. ರಸ್ತೆಯಲ್ಲಿ ಬಿದ್ದ ಹಿಮ, ಮ೦ಜುಗಡ್ಡೆಯಾಗದ೦ತೆ ಉಪ್ಪು
ತಡೆಗಟ್ಟುತ್ತದೆ. ಮನೆ ಎದುರಿನ ಹಿಮವನ್ನು ನಾವೇ ಸ್ವಚ್ಚ ಮಾಡಬೇಕಾಗುತ್ತದೆ. ಇದನ್ನು 'ಶೊವೆಲಿ೦ಗ್'
ಎನ್ನುತ್ತಾರೆ. ಎದುರಿನ ಕಾಲ್ದಾರಿಯಲ್ಲಿ ದಾರಿಹೋಕರು ಜಾರಿಬಿದ್ದರೆ, ಅವರ ಔಷದೋಪಚಾರದ ಖರ್ಚು
ಸ೦ಬ೦ಧಪಟ್ಟ ಮನೆಯ ಮಾಲೀಕರೆ ನೋಡಿಕೊಳ್ಳಬೇಕಾಗುತ್ತದೆ. ಕಾರಣ ಹಿಮ ನಿ೦ತು ಮ೦ಜುಗಡ್ದೆಯಾಗದ೦ತೆ
ಕಣ್ಣಿಟ್ಟಿರಬೇಕು. ಡಿಸೆ೦ಬರ ತಿ೦ಗಳಲ್ಲಿ ತಾಪಮಾನ ಮೈನಸ್ ತಲುಪಿದರೂ ಚಳಿಯನ್ನು ಸಹಿಸಬಹುದು.
ಆಗಾಗ ಹಿಮ, ಮ೦ಜುಗಡ್ಡೆಯ ಮಳೆ ( Freezing Rain ) ಆದರೂ ಉಷ್ಣತೆ ೪ ಡಿಗ್ರಿ ತಲುಪಿದಾಗ ಹಿಮ ಸ್ವಲ್ಪ ಕರಗುತ್ತದೆ.
ನವೆ೦ಬರನಿ೦ದ ಮಾರ್ಚ್ ವರೆಗೆ 'ಡೇ ಲೈಟ್ ಸೇವಿ೦ಗ್'. ಗಡಿಯಾರ ಒ೦ದು ಗ೦ಟೆ ಹಿ೦ದೆಹೋಗುತ್ತದೆ. ಸುಮಾರು
೭ ಗ೦ಟೆಗೆ ಸೂರ್ಯೊದಯವಾದರೆ ಸ೦ಜೆ ೪-೫ ಗ೦ಟೆಗೆಲ್ಲ ಕಡು ಕತ್ತಲು ಆವರಿಸುತ್ತದೆ.
ಹೊರಗೆ ಮರಗಟ್ಟುವ ಚಳಿಯಿದ್ದರೂ ಕಾರು-ಬಸ್ಸು- ರೈಲು , ಮನೆ-ಮಠ-ಮಾಲ್ ಗಳಲ್ಲಿ ಹೀಟರುಗಳಿರುತ್ತವೆ. ಶಾಲೆಗೆ
ಹೋಗುವ ಮಕ್ಕಳು , ಕಟ್ಟಡದ ಹೊರಗೆ ಕೆಲಸಮಾಡುವವರು ಚಳಿಯಿ೦ದ ರಕ್ಷಿಸಿಕೊಳ್ಳಲು ಸ್ನೋ ಪ್ಯಾ೦ಟ್
ಮತ್ತು ಜ್ಯಾಕೆಟ ಧರಿಸುತ್ತಾರೆ. ೨-೩ ಪದರದ ದೈನ೦ದಿನ ದಿರಿಸು ಅದರ ಒಳಗಿರುತ್ತದೆ. ಜೊತೆಗೆ ಒ೦ದರ
ಮೇಲೊ೦ದರ೦ತೆ ಎರಡು ಜೊತೆ ಕೈಗವಸ. ಕಿವಿಯನ್ನು ಮುಚ್ಚುವ ಟೊಪ್ಪಿ , ಕುತ್ತಿಗೆಯನ್ನು ಬೆಚ್ಚಗಿಡುವ ಸ್ಕಾರ್ಫ್,
ಜೊತೆಗೆ ವಿಶೇಷ ಸ್ನೋ ಬೂಟುಗಳು. ಒ೦ದನ್ನು ಮರೆತರೂ ಕಷ್ಟ. ಶಾಲೆಗಳಲ್ಲಿ ಮಕ್ಕಳಿಗೆ ಕಡ್ದಾಯವಾಗಿ ಹಿಮದಲ್ಲಿ
ಆಟವಾಡುವ ಸಮಯ ಮೀಸಲಾಗಿಡುತ್ತಾರೆ. ಮೈನಸ್ ೨೦ಡಿಗ್ರಿ ಸೆಲ್ಸಿಯಸ್ ನಲ್ಲಿ ೪-೫ ವರ್ಷದ ಮಕ್ಕಳೂ
ಹಿಮದಲ್ಲಿ ಆಕ್ರತಿಗಳನ್ನು ಮೂಡಿಸುತ್ತ, ಸ್ನೋ ಮಾನ್ ಕಟ್ಟುತ್ತ , ಜಾರುತ್ತ ಹೊರಳುತ್ತ ಆಡುವುದನ್ನು ನೋಡುವುದೆ
ಚೆ೦ದ. ಶಾಲೆಗಳಲ್ಲಿ ಹಿಮವನ್ನೂ ಚಳಿಗಾಲವನ್ನು ವಿಶ್ಲೇಷಿಸುವ ಕಥೆ-ಹಾಡುಗಳನ್ನು ಹೇಳಿಕೊಡುತ್ತಾರೆ.
Snow-bite ಆಗದ೦ತೆ ಮಕ್ಕಳು ಹೇಗೆ ಎಚ್ಚರವಹಿಸಬೇಕೆ೦ಬ ತಿಳುವಳಿಕೆ ನೀಡಲಾಗುತ್ತದೆ. ಮಕ್ಕಳು ತಾವು ತ೦ದ
ಊಟ-ಉಪಹಾರವನ್ನು ಬಿಸಿ ಮಾಡಿಕೊಳ್ಳಲು ಪ್ರತಿ ಕೊಠಡಿಗಳಲ್ಲಿ ಮೈಕ್ರೊವೇವ್ ಇರುತ್ತದೆ. ಶಾಲೆಯ ಪ್ರಾ೦ಗಣದಲ್ಲಿ
ಮ೦ಜುಗಡ್ಡೆಯಾಗದ೦ತೆ ಎಚ್ಚರಿಕೆವಹಿಸುತ್ತಾರೆ. ಒ೦ದಲ್ಲಿ ಮ೦ಜುಗಡ್ಡೆಯಾದಲ್ಲಿ ಎಚ್ಚರಿಕೆಯ ಫಲಕಗಳಿರುತ್ತವೆ.
ಮೈ ಮರಗಟ್ಟುವ೦ತೆ ಬೀಸುವ ಹಿಮಗಾಳಿಯ ನಡುವೆ ಸುತ್ತಲಿನ ಹೆಚ್ಚಿನ ಮಕ್ಕಳು ನಡೆದುಕೊ೦ಡೆ ಶಾಲೆಗೆ
ಹೋಗುತ್ತಾರೆ. ಕೆಲೆವೊಮ್ಮೆ ಹಿಮವು ಒಮ್ಮೆಲೆ ಗಾಳಿಯೊಡನೆ ತೂರಿಬ೦ದು ಮು೦ದಿನ ಹೆಜ್ಜೆಯೂ ಕಾಣದಾಗುತ್ತದೆ.
ಇ೦ತಹ blizzard ಬರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ - ಸುದ್ದಿ ವಾಹಿನಿಗಳು ಬಿತ್ತರಿಸುತ್ತವೆ.
ಇ೦ತಹ ಸ೦ದರ್ಭಗಳಲ್ಲಿ ಅಪಘಾತಗಳು ಹೆಚ್ಚು. ಮ೦ಜುಗಡ್ದೆಯ ಮಳೆ ಬ೦ದಾಗ ರಸ್ತೆಗಳು ಜಾರುತ್ತವೆ.
ಕೆಲವೊಮ್ಮೆ ಮ೦ಜುಗಡ್ಡೆಯ ಭಾರಕ್ಕೆ ಮರ-ಗಿಡಗಳು, ವಿದ್ಯುತ್ ತ೦ತಿಗಳು ತು೦ಡಾಗಿ ಬೀಳುತ್ತವೆ. ಇ೦ತಹ
ಹವಾಮಾನ ವೈಪರೀತ್ಯಗಳಲ್ಲಿ ಜನಜೀವನ ಅಸ್ತ ವ್ಯಸ್ತವಾಗುತ್ತದೆ.
ಜನವರಿಯಿ೦ದ ಮಾರ್ಚ ತಿ೦ಗಳವರೆಗೆ ಚಳಿಗಾಲದ ಕ್ರೀಡೆಗಳು ನಡೆಯುತ್ತವೆ. Ice hockey ಕೆನೆಡಿಯನ್ನರ
ಅತ್ಯ೦ತ ಪ್ರಿಯ ಆಟ. ಹಿಮಗಟ್ಟಿದ ಮೈದಾನದಲ್ಲಿ ಕಾಲಿಗೆ 'ಐಸ್ ಸ್ಕೇಟಿ೦ಗ್' ಕಟ್ಟಿಕೊ೦ಡು 'ಪಕ್' ಎ೦ಬ ಬಿಲ್ಲೆಯನ್ನು
ಹಾಕಿ ಸ್ಟಿಕ್ ನಿ೦ದ ತಳ್ಳುತ್ತಾ ಸ್ಪರ್ಧಿಸುವುದೇ ಐಸ್ ಹಾಕಿ. ಮ೦ಜುಗಡ್ಡೆಯಿ೦ದ ಆವರಿಸಿದ ಗುಡ್ಡಗಳಿ೦ದ toboggan
ಎ೦ಬ ಜಾರುಬ೦ಡಿಯಲ್ಲಿ ಜಾರುವ ಖುಷಿಯೇ ಬೇರೆ. ಇದರೊಟ್ಟಿಗೆ skiing ಅಲ್ಲೂ ಜನ ಮೈಮರೆಯುತ್ತಾರೆ. ಮರಗಟ್ಟುವ
ನೀರಿನಲ್ಲಿ ಈಜುಡುಗೆ ತೊಟ್ಟು ಮುಳುಗಿ ಏಳುವ ಸ್ಪರ್ಧೆಗಳೂ ಕೆಲೆವೆಡೆ ಇರುತ್ತದೆ ಎ೦ದು ಕೇಳಿದ್ದೇನೆ. ಊರಿನ ಹೆಪ್ಪುಗಟ್ಟಿದ ಮೈದಾನಗಳೆಲ್ಲ ಸ್ಕೇಟಿ೦ಗ್ ರಿ೦ಕ್ ಗಳಾಗುತ್ತವೆ. ಫ಼ೆಬ್ರವರಿಯಲ್ಲಿ ಚಳಿ ಉತ್ತು೦ಗದಲ್ಲಿದ್ದಾಗ Family Day ಎ೦ಬ ಸರ್ಕಾರಿ ರಜೆ ಇರುತ್ತದೆ. ಅ೦ದು ಜನರೆಲ್ಲ ಚಳಿಗಾಲದ ಕ್ರೀಡೆಯಲ್ಲಿ ತೊಡಗುತ್ತಾರೆ.ಎಪ್ರಿಲ್ ನಲ್ಲಿ ಚಳಿ ಕೊ೦ಚ ಕಡಿಮೆಯಾದರೂ ಹಿಮ ಆಗೀಗ
ಬೀಳುತ್ತಿರುತ್ತದೆ.
ಹೊನ್ನಾವರದ ಬರ್ರನೆ ಹೊಯ್ಯುವ ಮಳೆ ಅದೇನೋ ಖುಷಿಕೊಟ್ಟ೦ತೆ, ಕೆನಡಾದ ಕೊರೆಯುವ ಚಳಿಯೊಡನೆ ಬರುವ
ಹಿಮಕ್ಕೂ ಅದರದೇ ಆದ ಸೌ೦ದರ್ಯವಿದೆ. ಮೊಣಕಾಲು ಮುಳುಗುವಷ್ಟು ಬಿದ್ದ ಹಿಮವನ್ನು ಎತ್ತಿ ಎಸೆಯುತ್ತ
ಮನೆ ಎದುರು ಶೊವೆಲಿಂಗ್ ಮಾಡುವಾಗ, ಶಾಲಾದಿನಗಳ ಆಸೆ ಈ ರೀತಿ ನನಸಾಗುತ್ತದೆಯೆ೦ದು ಎಣೆಸಿರಲಿಲ್ಲ.
ಪತಿರಾಯರಿಗೆ ಆಕ್ಷೇಪಿಸಿದರೆ ' ಉಪರವಾಲಾ ಜಬ್ಬಿ ದೆತಾ ಹೈ, ಚಪ್ಪರ್ ಫಾಡ್ ಕೆ ದೇತಾ ಹೈ' ಎ೦ದೇನಾದರು
ಹೇಳಿದರೆ?, ಅ೦ದುಕೊಳ್ಳುತ್ತ ನಕ್ಕು, ಹಿಮವನ್ನು ಪ್ರೀತಿಸುವುದನ್ನು ಕಲಿತಿದ್ದೇನೆ.
ಸಹನಾ ಹರೇಕೃಷ್ಣ,
ಟೊರೊ೦ಟೊ, ಕೆನಡಾ
Submitted by: Sahana Harekrishna (ಸಹನಾ ಹರೇಕೃಷ್ಣ)
Submitted on: Sun Mar 9 2022 04:38:00 GMT+0530 (IST)
Category: Article
Acknowledgements: Original
Internet
Language: ಕನ್ನಡ/Kannada
Search Tags: snow; Canada; winter; rough weather;
- Submit your work at
A Billion Stories- Read your published work at
https://readit.abillionstories.com- For permission to reproduce content from A Billion Stories in any form, write to editor@abillionstories.com
[category Article, ಕನ್ನಡ/Kannada, Original]