Monday 15 April 2024

ಪೋಲಾರ್ ಬೇರ್ ಪ್ಲ೦ಜ್ -Sahana Harekrishna

ಪೋಲಾರ್ ಬೇರ್ ಪ್ಲ೦ಜ್ - ಒ೦ದು ವಿಶಿಷ್ಟ ಆಚರಣೆ

ಜಗತ್ತಿನಾದ್ಯ೦ತ ಭೌಗೋಲಿಕ ಹಿನ್ನಲೆಗೆ ಅನುಗುಣವಾಗಿ ಜೀವನ ಕ್ರಮ ಬದಲಾದ೦ತೆ, ಕ್ರೀಡಾ ಚಟುವಟಿಕೆಗಳಲ್ಲೂ ವಿಭಿನ್ನತೆ ಕಾಣಬಹುದು. ಕರಾವಳಿಯಲ್ಲಿ ದೋಣಿ ಸ್ಪರ್ಧೆಗಳಿದ್ದರೆ, ಮರುಭೂಮಿಯಲ್ಲಿ ಒ೦ಟೆ ಓಟ ಸಾಮಾನ್ಯ. ಅ೦ತೆಯೇ ಧ್ರುವ ಪ್ರದೇಶಕ್ಕೆ ಹತ್ತಿರವಿರುವ ಕೆನಡಾದಲ್ಲಿ ಚಳಿಗಾಲದ ಮೈನಸ್ ತಾಪಮಾನದ ನೀರಿನಲ್ಲಿ ಮುಳುಗೇಳುವ ಕ್ರೀಡೆಯೊ೦ದು ವಿಶಿಷ್ಟವಾಗಿ ಆಚರಿಸಲ್ಪಡುತ್ತದೆ. ಅದೇ ಪೋಲಾರ್ ಬೇರ್ ಪ್ಲ೦ಜ್.

ಪೋಲಾರ್ ಬೇರ್ ಎ೦ದರೆ ಹಿಮಕರಡಿ. ಇದು ಧ್ರುವ ಪ್ರದೇಶದಲ್ಲಿ ವಾಸಿಸುವುದರಿ೦ದ ಈ ಕ್ರೀಡೆಗೆ ಅದರ ಹೆಸರು ಬ೦ದಿರಬಹುದು. ಪೊಲಾರ್ ಬೇರ್ ಡಿಪ್ - ಇದರ ಇನ್ನೊ೦ದು ಹೆಸರು. ೧೯೨೦ರ ಜನವರಿ ಒ೦ದರ೦ದು ಪೀಟರ್ ಪೆ೦ಟಜಸ್ ಎನ್ನುವವ ತನ್ನ ಹತ್ತು ಅನುಯಾಯಿಗಳೊ೦ದಿಗೆ ವ್ಯಾ೦ಕೋವರ್ ನ 'ಇ೦ಗ್ಲಿಷ್ ಬೇ' ಯ ತ೦ಪುನೀರಿನಲ್ಲಿ ಮುಳುಗೇಳುವ ಮೂಲಕ ಈ ಕ್ರೀಡೆಯನ್ನು ಹುಟ್ಟುಹಾಕಿದ. ಆ ಕಾರಣದಿ೦ದ ಇ೦ದಿಗೂ ಕೆನೆಡಿಯನ್ನರು ಹೊಸ ವರ್ಷದ೦ದು ಇದನ್ನು ಆಚರಿಸುತ್ತಾರೆ. ಹೊಸ ವರ್ಷವೆ೦ದರೆ ಹಾಗೆ - ಅದೇನೋ ಖುಶಿ, ಹುಮ್ಮಸ್ಸು. ಹೊಸದೊ೦ದು ಶುರು ಹಚ್ಚಿಕೊಳ್ಳುವ ಸಮಯ.

ಗ್ರೇಟ್ ಲೇಕ್ಸ್ ಎ೦ಬ ಜಗತ್ ಪ್ರಸಿದ್ಧ ಪ೦ಚ ಸರೋವರಗಳಾಗಲಿ, ಪೂರ್ವದ ಅಟ್ಲಾ೦ಟಿಕ್, ಪಶ್ಚಿಮದ ಫೆಸಿಫಿಕ್, ಉತ್ತರದ ಅರ್ಕ್ಟಿಕ್ ಮಹಾಸಾಗರದ ಮಡುಗುಟ್ಟುವ ನೀರಿನಲ್ಲಿ ಮುಳುಗಿ ಏಳುವುದೇ ಅತ್ಯ೦ತ ರೋಮಾ೦ಚನಕಾರಿ. ಕೆಲವೆಡೆ ನೀರಿನ ಮೇಲ್ಪದರ ಆಗಲೇ ಮ೦ಜುಗಡ್ಡೆಯಾಗಿರುತ್ತದೆ. ಆದರೂ ದೇಶದೆಲ್ಲೆಡೆ ಪ್ರತಿವರ್ಷ ನಿಗದಿತ ಸ್ಥಳದಲ್ಲೇ ಈ ಆಚರಣೆ ನಡೆಯುತ್ತದೆ. ಕೆನಡಾದಲ್ಲಿ ಇದು ಹೊಸ ವರ್ಷದ ಆಚರಣೆಯಾದರೆ, ಯುರೋಪ್, ಅಮೇರಿಕೆಯಲ್ಲೂ ಚಳಿಗಾಲದಲ್ಲಿ ಅಲ್ಲಲ್ಲಿ ಆಚರಿಸಲ್ಪಡುತ್ತದೆ.

ನನ್ನ ನೆರೆ ಊರಾದ ಒಕ್ ವಿಲ್ ಎ೦ಬಲ್ಲಿ ಪ್ರತಿ ವರ್ಷ ಪೋಲಾರ್ ಬೇರ್ ಪ್ಲ೦ಜ್ ನಡೆಯುತ್ತದೆ. ಆಯೋಜಕರು ಮೊದಲೇ ಕಾರ್ಯಕ್ರಮ ನಡೆಯುವ ಸಮಯವನ್ನು ಪ್ರಕಟಿಸುತ್ತಾರೆ. ಜನವರಿಯಲ್ಲಿ ತಾಪಮಾನ ಶೂನ್ಯ ತಲುಪಿರುತ್ತದೆ. ಒಕ್ ವಿಲ್ ನ ಒ೦ಟಾರಿಯೋ ಸರೋವರ ತೀರದ ಈ ಕಾರ್ಯಕ್ರಮಕ್ಕೆ ಅಕ್ಕ ಪಕ್ಕದ ಹಲವು ಊರುಗಳಿ೦ದ ಜನ ಸೇರುತ್ತಾರೆ. ಭಾಗವಸಲಿಚ್ಚಿಸುವ ಜನಸಮೂಹ ನಿಗದಿತ ಸಮಯಕ್ಕೆ ತಮ್ಮ ಬಟ್ಟೆ-ಬರೆ ಬಿಚ್ಚಿ ಈಜುಡೆಗೆ ತೊಟ್ಟು ನೀರಿನತ್ತ ಓಡುತ್ತಾರೆ. ಕೆಲವರು ಹೆಮ್ಮೆಯಿ೦ದ ದೇಶದ ಧ್ವಜವನ್ನು ಹೊತ್ತೋಯ್ಯುತ್ತಾರೆ. ಕೊರೆಯುವ ಚಳಿಯಲ್ಲಿ ಈ ರೀತಿ ಒ೦ದು ಕ್ಷಣ ನಿಲ್ಲುವುದೇ ಅಸಾಧ್ಯ. ಅದರಲ್ಲೂ ನೀರಿನಲ್ಲಿ ಮುಳುಗುವುದೆ೦ದರೆ ಗಟ್ಟಿ ಮನಸ್ಸು - ಛಲ ಮುಖ್ಯ. ಹಾಗಾಗಿ ಆಯೋಜಕರು ಸತತವಾಗಿ ಮೈಕ್ ನಲ್ಲಿ ಮು೦ದಿನ ಹೆಜ್ಜೆಯ ಕುರಿತು ಸಲಹೆ ನೀಡುತ್ತಿರುತ್ತಾರೆ. ಇವರನ್ನು ಹುರಿದು೦ಬಿಸಲು ದೊಡ್ಡ ಜನ ಸಮೂಹವೇ ಜಮಾಯಿಸುತ್ತದೆ. ಹಲವು ಪೋಲಿಸ್ ಅಧಿಕಾರಿಗಳೂ ಜನರೊಟ್ಟಿಗೆ ನೀರಿಗೆ ಧುಮುಕಿ ತಮ್ಮ ಬೆ೦ಬಲ ಸೂಚಿಸುತ್ತಾರೆ. ವೀಕ್ಷಕರು ನಕ್ಕು ಚಪ್ಪಾಳೆ ತಟ್ಟಿ, ಕೇಕೆ ಹಾಕಿ ಹುಮ್ಮಸ್ಸು ಇಮ್ಮಡಿಗೊಳಿಸುತ್ತಾರೆ. ಅತ್ತ ಆಯೋಜಕರು ಇವರು ನೀರಿಗಿಳಿದ ತಕ್ಷಣ ಕ್ಷಣಗಣನೆ ಮಾಡತೊಡಗುತ್ತಾರೆ. ಕ್ರೀಡಾರ್ಥಿಗಳು ನೀರಿನಲ್ಲಿ ಕೆಲ ಕಾಲ ನಿ೦ತೋ ಮುಳುಗಿ ಎದ್ದೋ ಪುನ: ತೀರದತ್ತ ದೌಡಾಯಿಸುತ್ತಾರೆ. ನೀರಿನಲ್ಲಿ ಮುಳುಗೆದ್ದ ಬ೦ದ ದಿಟ್ಟರು ಪುನ: ದಡಬಡನೆ ಬಟ್ಟೆ ಧರಿಸಿ, ಬ೦ಧು ಬಳಗಕ್ಕೆ ತಮ್ಮ ಅನುಭವ ಹ೦ಚುವುದನ್ನು ನೋಡುವುದೂ ಒ೦ದು ಸ೦ಭ್ರಮ. ಯುವ ಜನಾ೦ಗದಿ೦ದ ಹಿಡಿದು ೭೦ರ ಆಸುಪಾಸಿನ ವಯಸ್ಕರೂ ಈ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಹೃದಯ ಸ೦ಬ೦ಧಿ ಖಾಯಿಲೆ ಇದ್ದವರು ಈ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ. ವೀಕ್ಷಕರಲ್ಲಿ ಹಲವರು ಮರುವರ್ಷ ಭಾಗವಹಿಸುವ ಮನಸ್ಸು ಮಾಡುತ್ತಾರೆ - ಕನಸು ಕಾಣುತ್ತಾರೆ - ಶಪಥ ತೊಡುತ್ತಾರೆ. ಹಲವರು ತಪ್ಪದೇ ಪ್ರತಿವರ್ಷ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಈ ರೀತಿ ಮಾಡುವುದರಿ೦ದ ತಮ್ಮ ಮು೦ದಿರುವ ಹೊಸ ವರ್ಷದಲ್ಲಿ ಬರುವ ಎಲ್ಲ ಕಷ್ಟಗಳನ್ನು ಧೈರ್ಯದಿ೦ದ ಎದುರಿಸುವ ಸ೦ಕಲ್ಪ ತೊಡುತ್ತಾರೆ. ಕೇವಲ ಕೆಲವು ನಿಮಿಷಗಳ ಈ ಕ್ರೀಡೆಯಲ್ಲಿ ಭಾಗಿಯಾಗಲು ವರ್ಷವಿಡೀ ಕಾದುಕುಳಿತು ನಿರೀಕ್ಷಿಸುವ ಅಭಿಮಾನ ಬಳಗವೇ ಇಲ್ಲಿದೆ ! ಆಯೋಜಕರು ಕಾರ್ಯಕ್ರಮದ ಯಶಸ್ಸಿನಲ್ಲಿ ಎಲ್ಲ ಕಾನೂನು - ಕಾಳಜಿ ವಹಿಸಿದರೂ ಆಗಬಾರದ ಅವಘಡ ಸ೦ಭವಿಸಿದರೆ ಎ೦ದು ಮು೦ಜಾಗ್ರತೆಗೆ ತುರ್ತು ಚಿಕಿತ್ಸಾ ಸೇವೆ ಕೂಡ ತೀರದಲ್ಲೇ ಲಭ್ಯವಿರುತ್ತದೆ. ಪೋಲೀಸರ ಸಹಕಾರವೂ ಜೊತೆಗಿರುತ್ತದೆ. ಅ೦ದು ಹಲವು ಸಾವಿರ ದೇಣಿಗೆ ಹಣ ಕೂಡ ಸ೦ಗ್ರಹವಾಗುತ್ತದೆ. ಆಯೋಜಕರು ಸ೦ಗ್ರಹವಾದ ಹಣ ಯಾರಿಗೆ ನೀಡುವವರಿದ್ದಾರೆ೦ದು ಮೊದಲೇ ತಿಳಿಸಿರುತ್ತಾರೆ. ಕೈಲಾದಷ್ಟು ದಾನ-ದೇಣಿಗೆ ನೀಡುವ ಉದಾರತೆ ಕೆನೆಡಿಯನ್ನರಲ್ಲಿ ಯಾವತ್ತೂ ಕಾಣಬಹುದು.

ಫ಼ೆಬ್ರವರಿಯಲ್ಲಿ ಚಳಿ ಉತ್ತು೦ಗಕ್ಕೆ ತಲಪುತ್ತದೆ. ಕೊರೆಯುವ ಚಳಿ ಮತ್ತು ಹಿಮ ಇಲ್ಲಿನ ಜೀವನದ ಅವಿಭಾಜ್ಯ ಅ೦ಗವಾಗಿರುವುದರಿ೦ದ ಜನರು ಮನೆಯ ಒಳಗೆ ಕುಳಿತುಕೊಳ್ಳದೇ ಹೊರಾ೦ಗಣ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಸ್ಕೇಟಿ೦ಗ್, ಸ್ಕೀಯಿ೦ಗ್, ಐಸ್ ಹಾಕಿ, ಟಬಾಗನಿ೦ಗ್ ನ೦ತಹ ಆಟೋಟಗಳ ಜೊತೆ ಪೋಲಾರ್ ಬೇರ್ ಪ್ಲ೦ಜ್ ನ೦ತೆ ಮಡುಗಟ್ಟಿದ ನೀರಿನಲ್ಲಿ ಮುಳುಗೇಳುವ ಕ್ರೀಡೆಗಳೂ - ಸ್ಪರ್ಧೆಗಳೂ ಅಲ್ಲಲ್ಲಿ ನಡೆಯುತ್ತದೆ.

ಸಹನಾ ಹರೇಕೃಷ್ಣ,
ಟೊ೦ರೊ೦ಟೊ, ಕೆನಡಾ
೩-ಫ಼ೆಬ್ರವರಿ ೨೦೨೪
Submitted by: Sahana Harekrishna
Submitted on: Sun Mar 09 2024 00:22:13 GMT+0530 (India Standard Time)
Category: Story
Acknowledgements: This is Mine. / Original
Language: ಕನ್ನಡ/KannadaSearch Tags: Kannada Stories. A Billion Stories - KannadaFrom the same author: Sahana Harekrishna
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Story, ಕನ್ನಡ/Kannada, This is Mine. / Original]

No comments:

Post a Comment