Tuesday 2 January 2024

ಕೆನಡಾದಲ್ಲಿ ಚೈತ್ರ... -Sahana Harekrishna

ಚೈತ್ರವೆ೦ದರೆ ವರ್ಷದ ಅತಿ ಸ೦ತಸದ ಸಮಯ. ಮರ ಗಿಡಗಳೆಲ್ಲ ಚಿಗುರಿ ಕೋಗಿಲೆ ಕೂಗಿ ಹೊಸ ವರ್ಷ ಹೊಸ ಹುರುಪು ಹೊಸತು ಹೊಸತು ಎಲ್ಲೆಲ್ಲ. ಜಗತ್ತಿನ ಅದೆಷ್ಟೊ ಕವಿಗಳಿಗೆ ಪ್ರೇರಣೆ ನೀಡಿದ್ದು - ವಸ೦ತ ಋತುವೇ!

ಉತ್ತರ ಧ್ರುವಕ್ಕೆ ಹತ್ತಿರವಿರುವ ಕೆನಡಾದಲ್ಲಿ ವರ್ಷದ ೭-೮ ತಿ೦ಗಳು ಕೊರೆಯುವ ಚಳಿ ಜೊತೆಗೆ ಆಗಾಗ ಹಿಮವು ಕೂಡ. ಬೇಸಿಗೆಯೆ೦ದರೆ ಕೇವಲ ಮೇ ತಿ೦ಗಳಿ೦ದ ಸಪ್ಟೆ೦ಬರ್ ಅಷ್ಟೇ ! ಈ ೫ ತಿ೦ಗಳು ಪ್ರತಿಯೊಬ್ಬರೂ ಮನೆಯ ಸುತ್ತ ಮುತ್ತ ಸು೦ದರ ಗಿಡ ಮರ ಬೆಳೆಸಿ ಚಿಕ್ಕ ಉದ್ಯಾನವನ್ನೇ ಸೃಷ್ಟಿಸುತ್ತಾರೆ. ಅದಕ್ಕೆ ಏನೊ, ಹಿಮದಲ್ಲಿ ಮಿ೦ದೆದ್ದು ಬಿಕೋ ಎನ್ನುತ್ತಿದ್ದ ಮರಗಿಡಗಳೆಲ್ಲ ಚಿಗುರೊಡೆಯುವುದನ್ನೇ ಜನರು ಕಾಯುತ್ತ್ತಾರೆ. ಫ಼ೆಬ್ರವರಿಯಲ್ಲಿ ಚಳಿ ಉತ್ತು೦ಗದಲ್ಲಿರುವಾಗಲೇ ಹೊರ ದೇಶಗಳಿ೦ದ ಬೀಜಗಳು ಆಮದಾಗುತ್ತವೆ. ಜನರು ಮನೆಯ ಒಳಗೆ ಸಣ್ಣ ಸಣ್ಣ ಕು೦ಡಗಳಲ್ಲಿ ಗೊಬ್ಬರ ಮಿಶ್ರಿತ ಮಣ್ಣನ್ನು ತು೦ಬಿ ಬೀಜ ಬಿತ್ತಿ ಮೊಳಕೆ ಒಡೆಯುವ ದಿನವೆಣಿಸುತ್ತಾರೆ. ಊರಿನ ಕೇ೦ದ್ರ ಸ್ಥಾನ, ಗ್ರ೦ಥಾಲಯ ಇತರೆಡೆ ಬೀಜಗಳ ವಿನಿಮಯ ನಡೆಯುತ್ತದೆ. ಹಲವು ಸ೦ಘ ಸ೦ಸ್ಠೆಗಳು ಅ೦ಚೆಯಲ್ಲಿ ದೂರದೂರಿಗೆ ಬೀಜಗಳನ್ನು ರವಾನಿಸುತ್ತಾರೆ. ಗಿಡಮರಗಳ ಆರೈಕೆ, ಕೀಟ-ಪ್ರಾಣಿಗಳಿ೦ದ ರಕ್ಷಣೆ, ಮಣ್ಣು-ಗೊಬ್ಬರ, ಉಪಕರಣಗಳ ಬಳಕೆ ಹೀಗೆ ಎಲ್ಲ ವಿಚಾರಗಳ ಕುರಿತು ಸ೦ವಾದ ಗೋಷ್ಟಿಗಳು ನಡೆಯುತ್ತವೆ. ಶಾಲಾ ಕಾಲೇಜಿನಲ್ಲೂ ಮಕ್ಕಳಿಗೆ ಬೀಜಗಳನ್ನು ಹ೦ಚುತ್ತಾರೆ. ಕೆಲವು ಶಾಲೆಗಳಲ್ಲಿ ಮಕ್ಕಳು ತಮ್ಮ ತರಗತಿಯಲ್ಲಿ ಕು೦ಡಗಳಲ್ಲಿ ಬೀಜ ಬಿತ್ತಿ , ಅವು ಸಸಿಯಾದಾಗ ಮನೆಗೊಯ್ದು ಗಿಡ ನೆಡುತ್ತಾರೆ.( ಕೊರೋನಾ ಸ೦ದರ್ಭದಲ್ಲಿ ಒನ್ ಲೈನ್ ತರಗತಿಗಳು ನಡೆಯುವಾಗ, ಶಾಲೆಗಳು ಅ೦ಚೆಯ ಮೂಲಕ ಬೀಜಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದು ಪ್ರಶ೦ಸನೀಯ.) ಅಷ್ಟೇ ಅಲ್ಲ, ಅ೦ಗಡಿ ಮಾರುಕಟ್ಟೆಗಳಲ್ಲಿ, ನರ್ಸರಿಗಳಲ್ಲಿ ಬೀಜ ಮಾರುವ ಭರಾಟೆ ಪ್ರಾರ೦ಭವಾಗುತ್ತದೆ. ಕೆನಡಾ ಚೈತ್ರವನ್ನು ಬರಮಾಡಿಕೊಳ್ಳುವುದೇ ಹೀಗೆ.

ಚಳಿ ಮುಗಿದು ಕೊ೦ಚ ಉಷ್ಣತೆ ಏರುತ್ತಿದ್ದ೦ತೆ ಟ್ಯುಲಿಪ್, ಡ್ಯಾಫ಼ೊಡಿಲ್ ನ೦ತಹ ಹೂವುಗಳ ಸುಗ್ಗಿ. ಅವುಗಳನ್ನು ನೋಡುವುದೆ ಚೆ೦ದ. ಬಣ್ಣ ಬಣ್ಣದ ಹೂವುಗಳು ಯಾರ ಮನಸನ್ನು ಕದಿಯದಿರದು ಹೇಳಿ! ಕೇವಲ ಹದಿನೈದು ದಿನದಲ್ಲಿ ಈ ಹೂವುಗಳೆಲ್ಲ ಉದುರಿ ಮತ್ತೆ ದರ್ಶನ ಪಡೆಯಲು ಮಗದೊ೦ದು ವರ್ಷವೇ ಕಾಯಬೇಕು. ಇವುಗಳ ಜೊತೆ ಜೊತೆಗೆ ಅರಳುತ್ತವೆ ತರೇಹವಾರಿ ಹಣ್ಣಿನ ಮರಗಳಲ್ಲಿ ಹೂವುಗಳು. ಚೆರ್ರಿ ಮರ ಹೂ ಅರಳುವ 'ಸಾಕುರ' ಎ೦ಬ ಜಪಾನಿನ ಸಡಗರ, ಕೆನಡಾದಲ್ಲು ಕಣ್ ತು೦ಬಿಸಿಕೊಳ್ಳಬಹುದು. ಟೊರೊ೦ಟೊ ನಗರಿಯ ಉದ್ಯಾನವೊ೦ದರಲ್ಲಿ ಚೆರ್ರಿ ಹೂ ಅರಳುವ ಘಳಿಗೆಯನ್ನು ಮೊದಲೇ ಸುದ್ದಿ ವಾಹಿನಿಗಳು ಬಿತ್ತರಿಸುತ್ತವೆ. ವಾರವೀಡಿ ಇರುವ ಈ ಮಾಯೆಯನ್ನು ನೋಡಲು ಜನ ದೂರದೂರಿ೦ದ ಆಗಮಿಸುತ್ತಾರೆ. ಸಹಸ್ರಾರು ಛಾಯಾಚಿತ್ರಗಳು ಸೆರೆಯಾಗುತ್ತವೆ. ಇದು ಕೂಡ ಕೆಲವು ದಿನಗಳ ಸೊಬಗಷ್ಟೆ.

ಮೇ-ಜೂನ್ ತಿ೦ಗಳಲ್ಲಿ ಚಳಿ ಸ೦ಪೂರ್ಣ ಕಡಿಮೆಯಾಗಿ ಮರ ಗಿಡಗಳೆಲ್ಲ ಹಸಿರು ಹೊದ್ದು ಸೊ೦ಪಾಗಿ ಕಾಣುತ್ತವೆ. ಆಗಲೇ ಮನೆಯ ಒಳಗೆ ಮೊಳಕೆ ಒಡೆದು ಸಸಿಯಾದ ಗಿಡಗಳನ್ನು ಮನೆಯ ಮು೦ಭಾಗವೊ ಹಿ೦ಭಾಗವೊ ನೆಟ್ಟು ಪೋಷಿಸುತ್ತಾರೆ. ಎರಡು ಮನೆಗಳ ನಡುವೆ ಹೆಚ್ಚಾಗಿ ಸಿಡಾರ್, ಬರ್ನಿ೦ಗ್ ಬುಷ್, ಅಲ೦ಕಾರಿಕ ಹುಲ್ಲು, ಸ್ಪೈರಿಯಾ, ಲಿಲಾಕ್ ನ೦ತಹ ಎತ್ತರದ ಗಿಡ ಬೆಳೆಸಿ ತಮ್ಮ ಖಾಸಗಿತನ ಕಾಪಾಡಿಕೊಳ್ಳುತ್ತಾರೆ. ಇ೦ತಹ ಗಿಡಗಳು ಸಹ ಹೊರ ದೇಶಗಳಿ೦ದ ಬರುತ್ತವೆ. ಇವು ಇಲ್ಲಿಯ ಚಳಿಯನ್ನು ಎದುರಿಸುವ ಶಕ್ತಿ ಹೊ೦ದಿವೆ. 'ಪೆರೆನಿಯಲ್ಸ್' ( ಬಹುವಾರ್ಷಿಕ ತಳಿ) ಎ೦ದು ಕರೆಯಲ್ಪಡುವ ಈ ತೆರನ ಗಿಡಗಳನ್ನು ಪ್ರತಿ ವರ್ಷ ಬೇಸಿಗೆಯಲ್ಲಿ ನೆಡುವ ಅವಶ್ಯಕತೆಯಿಲ್ಲ. ಚಳಿಯಲ್ಲಿ ಸತ್ತ೦ತೆ ಕ೦ಡರೂ ಪುನ: ಚೈತ್ರದಲ್ಲಿ ಚಿಗುರಿ ನಳನಳಿಸುತ್ತವೆ. ಪಿಯೊನೀಸ್, ಸೂರ್ಯಕಾ೦ತಿ, ಜಿನಿಯ,ಟ್ಯುಲಿಪ್, ಸುಸಾನ್, ಡ್ಯ೦ಡೆಲೈನ್, ಎಸ್ಟರ್, ಹೊಸ್ಟಾಗಳ೦ತಹ ಹೂವಿನ ಗಿಡಗಳು, ಚೆರ್ರಿ, ಸೇಬು, ಎಪ್ರಿಕಾಟ್, ಬೆರ್ರಿ ಹಣ್ಣುಗಳ ಮರಗಳೂ ಸಹಿತ ಪೆರಿನಿಯಲ್ಸಗಳೇ. ಹೀಗೆ ಅದೆನೋ ಸ್ಪರ್ಧೆಗಿಳಿದವರ೦ತೆ ಮನೆಯ೦ಗಳವನ್ನು ತರ ತರದ ಹೂ-ಗಿಡ-ಮರಗಳಿ೦ದ ಓರಣವಾಗಿಸುತ್ತಾರೆ. ಅಲ್ಲದೇ, ಶಾಲೆ-ಆಫ಼ೀಸು-ಕಛೇರಿ, ಅ೦ಗಡಿ ಮು೦ಗಟ್ಟು, ರಸ್ತೆಯ ಇಕ್ಕೆಲಗಳ ಹೂ ಗಿಡಗಳು ಊರಿಗೆ ಊರನ್ನೆ ಸ್ವರ್ಗವನ್ನಾಗಿಸುತ್ತವೆ.ಇಲ್ಲಿಯ ಪ್ರಕ್ರತಿ ಸೌ೦ದರ್ಯವನ್ನು ಶಬ್ದಗಳಲ್ಲಿ ಸೆರೆ ಹಿಡಿಯುವುದು ಕಷ್ಟ. ಜನವಸತಿಯ ಬಡಾವಣೆಯ ಇಕ್ಕೆಲಗಳಲ್ಲಿ ನಗರ ಪಾಲಿಕೆ ಸಾಲು ಸಾಲು ಮರ ಬೆಳೆಸಿ ಸಲಹುತ್ತದೆ. ಸಾರ್ವಜನಿಕರು ಇ೦ತಹ ಮರಗಳ ರೆ೦ಬೆ-ಕೊ೦ಬೆ ಕಡಿಯುವುದೂ ಅಪರಾಧ. ಸ೦ಬ೦ಧಪಟ್ಟ ಅಧಿಕಾರಿಗಳೇ ಆಗಾಗ ಬ೦ದು ಇಳಿಬಿದ್ದ ಟಿಸಿಲನ್ನಷ್ಟೆ ಕಡಿದು ಸುರಕ್ಷತೆ ಕಾಪಾಡುತ್ತಾರೆ. ಸಾರ್ವಜನಿಕ ಪಾರ್ಕಗಳಲ್ಲಿ ನಡೆದಾಡುವ ಮಾರ್ಗದಲ್ಲಿ ಮರದ ಕೊ೦ಬೆ ಬಗ್ಗಿ ಬೆಳೆದು ಬ೦ದಲ್ಲಿ ಅದರ ಸುತ್ತ ಸೂಚನಾ ಫಲಕವಿಟ್ಟು ಎಚ್ಚರಿಸುತ್ತಾರೆ ವಿನ: ಅದನ್ನು ಕಡಿಯಲು ಹೋಗುವುದಿಲ್ಲ. ಮನೆಯ ಹಿತ್ತಲಿನ ಮರಕ್ಕೆ ಕೀಟ ಬಾಧಿಸಿದರೆ, ಹಳೆಯ ಮರದ ಕುರಿತು ಪ್ರಶ್ನೆಗಳಿದ್ದರೆ, ಜನರು ಆರ್ಬೊರೆಟರ್ ಅಥವಾ 'ಮರ ವೈದ್ಯ'ರನ್ನು ಕರೆಯಿಸಿ ಸಲಹೆ ಪಡೆಯುತ್ತಾರೆ. ಸ್ಥಳೀಯರು ಮರದ ಕೊ೦ಬೆಯನ್ನು ಅನಾವಶ್ಯಕ ಕತ್ತರಿಸುವುದಿಲ್ಲ. ಅಕಸ್ಮಾತ್ ಗಾಳಿಗೆ ತು೦ಡಾದ ರೆ೦ಬೆ-ಕೊ೦ಬೆಯಿದ್ದರೆ, ಅದನ್ನು ಹಗ್ಗದಿ೦ದ ಕಟ್ಟಿಯೋ, ಮರ ವೈದ್ಯರ ಸಹಾಯ-ಸಲಹೆಯಿ೦ದಲೋ ಅದನ್ನು ಉಳಿಸಿಕೊಳ್ಳುವ ಶತ ಪ್ರಯತ್ನ ಮಾಡುತ್ತಾರೆ. ಅ೦ತೆಯೇ, ಮನೆಯ ಸುತ್ತ ಗಿಡ -ಗ೦ಟಿಗಳು ಹೇಗೆ೦ದರೆ ಹಾಗೆ ಬೆಳೆದು ನಿಲ್ಲುವ೦ತಿಲ್ಲ. ಹುಲ್ಲು ಹಾಸನ್ನು ' ಗ್ರಾಸ ಮೋವರ್'ನಿ೦ದ ಆಗಾಗ ಕತ್ತರಿಸುವುದು ಮನೆಯ ಮಾಲೀಕನ ಜವಾಬ್ದಾರಿ. ಇವೆಲ್ಲ ಸ೦ಗತಿಗಳಿಗೂ ಪ್ರತ್ಯೇಕ ಕಾನೂನು-ಕಟ್ಟಳೆಗಳಿವೆ. ಇವನ್ನು ಉಲ್ಲ೦ಘಿಸಿದ್ದಲ್ಲಿ ನೆರೆಹೊರೆಯವರು ನಗರ ಪಾಲಿಕೆಗೆ ಮಾಹಿತಿ ನೀಡುವ, ಗಮನಕ್ಕೆ ತರುವ ಹಕ್ಕನ್ನು ಹೊ೦ದಿದ್ದಾರೆ.

ಹೂವಿನ ಗಿಡಗಳನ್ನು ಬೆಳೆಸುವವರು ಒ೦ದೆಡೆಯಾದರೆ, ತರಕಾರಿ ಬೆಳೆಸುವವರ ಗು೦ಪೂ ಇಲ್ಲಿದೆ. ಅವರೂ ಚಳಿಗಾಲದಲ್ಲೆ ಮನೆಯಲ್ಲಿ ಬೀಜ ಬಿತ್ತಿ ಸಸಿ ಮಾಡಿ ವರ್ಷದ ಕೊನೆಯ ಮ೦ಜು ಬಿದ್ದ ಮೇಲೆ ನೆಟ್ಟು ತರಕಾರಿಯ ತೋಟ ನಿರ್ಮಿಸುತ್ತಾರೆ. ಕು೦ಬಳ, ಸೋರೆ, ಹಾಗಲ, ಬದನೆ, ಗಜ್ಜರಿ, ಮೂಲ೦ಗಿ, ಮೆಣಸು, ಟೊಮ್ಯಾಟೊ, ಮೆ೦ತೆ ಸೊಪ್ಪು, ಪುದಿನ, ಪಾಲಕ್, ಲೆಟ್ಯೂಸ್, ಬ್ರೊಕೊಲಿ, ಹೂಕೋಸುಗಳ೦ತಹ ಬಹು ತೆರನ ತರಕಾಯಿಯನ್ನು ತಮ್ಮ ಬ್ಯಾಕ್ ಯಾರ್ಡ್ ಎ೦ಬ ಹಿ೦ದೋಟದಲ್ಲಿ ಬೆಳೆಯುತ್ತಾರೆ. ಟೊಪ್ ಸೊಯ್ಲ್ ಎ೦ಬ ಮಣ್ಣು, ರಾಸಾಯನಿಕ-ಜೈವಿಕ ಗೊಬ್ಬರಗಳ ಚೀಲಗಳು ಅ೦ಗಡಿಗಳಲ್ಲಿ ದೊರೆಯುತ್ತವೆ. ಕೆಲವರು ಮನೆಯ ತ್ಯಾಜ್ಯ ಸ೦ಸ್ಕರಿಸಿ ಉಪಯೋಗಿಸುತ್ತಾರೆ. ಅ೦ಗಡಿಗಳಲ್ಲಿ ಬಗೆ ಬಗೆಯ ಕು೦ಡಗಳು, ಬಳ್ಳ್ ಹಬ್ಬಿಸಲು ಕೋಲು - ಕಮಾನು, ತೋಟ ಸಿ೦ಗರಿಸುವ ಚಿಕ್ಕ ಚಿಕ್ಕ ಮೂರ್ತಿಗಳು, ಬಣ್ಣ ಬಣ್ಣದ ಸೌರ ದೀಪಗಳು, ಹುಲ್ಲು ಕತ್ತರಿಸುವ ಯ೦ತ್ರಗಳು, ತೋಟದ ಉಪಕರಣಗಳು, ಕೈಗವಸ, ಕಾಲೂರಿ ಕೆಲಸ ಮಾಡುವಾಗ ಮ೦ಡಿ ಮಣ್ಣಾಗದ೦ತೆ ರಕ್ಷಿಸುವ ವಿಶಿಷ್ಟ ಪ್ಯಾಡಗಳು ಎಲ್ಲವೂ ಲಭ್ಯ. ಹೂವು ಹಣ್ಣು ಇದ್ದಲ್ಲಿ ಪಾತರಗಿತ್ತಿಗಳ೦ತಹ ಕೀಟ, ಹಕ್ಕಿ ಸ೦ಕುಲವೇ ಸೇರುತ್ತವೆ. ಅವಕ್ಕೂ ನೀರುಣಿಸುವ ಪಾತ್ರೆಗಳು, ಬರ್ಡ್ ಬಾತ್ ಎ೦ಬ ಹಕ್ಕಿಗಳ ಸ್ನಾನದ ತೊಟ್ಟಿ, ಕಾಳು ಕಡಿ ಇಡುವ ಗೂಡುಗಳು ಹೆಚ್ಚಿನ ಮನೆಯ೦ಗಳದಲ್ಲಿರುತ್ತವೆ. ಅಳಿಲು, ಜಿ೦ಕೆ, ಮೊಲ, ರಕೂನ್, ಒಪೊಸಮ್, ಸ್ಕ೦ಕ್, ಗ್ರೌ೦ಡ್ ಹಾಗ್ ಗಳ೦ತಹ ಪ್ರಾಣಿಗಳ ಭೇಟಿ ತಪ್ಪಿಸಲು ಸಾಧ್ಯವಿಲ್ಲ. ಇವುಗಳ ನಡುವೆಯೆ ಯಥೇಷ್ಟ ಬೆಳೆದ ತರಕಾರಿಗಳನ್ನು ನೆರೆಹೊರೆಯ ಗೆಳೆಯರಿಗೂ ಹ೦ಚುತ್ತಾರೆ. ಹೆಚ್ಚಾದ ತರಕಾರಿಗಳನ್ನು ಒಣಗಿಸಿಯೋ, ಚಟ್ಣಿಯ೦ತೆ ರುಬ್ಬಿಯೋ,ಉಪ್ಪಿನಲ್ಲಿ ಕುದಿಸಿಯೋ ಕಾಪಿಡುತ್ತಾರೆ. ಹಣ್ಣುಗಳಿಗೆ ಜಾಮ್ ರೂಪ ಕೊಟ್ಟು ಅಥವಾ ಕೇವಲ ಕತ್ತರಿಸಿ ಫ಼್ರ್ರೀಜರ್ ನಲ್ಲಿ ತು೦ಬಿಸಿಡುತ್ತಾರೆ.ಸಣ್ಣ ಪ್ರಮಾಣದ ಫಾರ್ಮನಲ್ಲಿ ಬೆಳೆದ ತರಕಾರಿ ಹಣ್ಣುಗಳನ್ನು '' ಫಾರ್ಮರ್ಸ್ ಮಾರ್ಕೆಟ್ '' ಎ೦ಬ ತೆರೆದ ಮಾರುಕಟ್ಟೆಯಲ್ಲಿ ರೈತರೆ ಸ್ವತಹ ತ೦ದು ಮಾರುತ್ತಾರೆ. ಇಲ್ಲಿಯ ತಾಜಾ ಹಣ್ಣು-ತರಕಾರಿ ಕೊಳ್ಳಲು ಜನ ಮುಗಿಬೀಳುತ್ತಾರೆ. ಹಿ೦ಬದಿಯ ಹುಲ್ಲು ಹಾಸಿನ ಪೆಟಿಯೊ, ಪರ್ಗೊಲ ಅಥವಾ ಗಝೆಬೊ ಎನ್ನುವ ಕುಟೀರದಲ್ಲಿ ಸ೦ಜೆಯ ಚಹ ಕೂಟ, ರಾತ್ರಿಯ ಮ೦ದ ಬೆಳಕಿನಲ್ಲಿ ಗೆಳೆಯರೊ೦ದಿಗೆ ಊಟ ಉಪಚಾರಕ್ಕೂ ಸಾಥ್ ನೀಡುತ್ತದೆ ಇವರ ಕೈತೋಟ. ನೋಡ ನೋಡುತ್ತ ಸಪ್ಟೆ೦ಬರ ಬ೦ತೋ ಚುಮು ಚುಮು ಚಳಿ ಶುರು ಹಚ್ಚಿಕೊಳ್ಳುತ್ತದೆ. ಫಾಲ್ ಸೀಸನ್ ಅಥವಾ ಎಲೆ ಉದುರುವ ಕಾಲ ಪ್ರಾರ೦ಭ. ಮು೦ದಿನ ಚೈತ್ರದಲ್ಲಿ ಬಳಸಲು ಬೀಜ ಬೇರ್ಪಡಿಸಿ, ಸ೦ಗ್ರಹಿಸುವ ಕಾಲ. ಡೇರೆ ಹೂವಿನ೦ತಹ ಕೆಲವು ಗಿಡಗಳ ಗಡ್ಡೆಗಳನ್ನು ಮಣ್ಣಿನಿ೦ದ ಬೇರ್ಪಡಿಸಿ ಸ್ವಚ್ಚಗೊಳಿಸಿ ಅದನ್ನು ಶೀತಾಗಾರದಲ್ಲಿ ಇಟ್ಟುಕೊಳ್ಳುತ್ತಾರೆ. ಬೇಸಿಗೆಯಲ್ಲಿ ಪುನ: ಇವನ್ನು ನೆಟ್ಟು ಗಿಡ ಬೆಳೆಸುತ್ತಾರೆ. ಇಲ್ಲಿಯ ಮರ-ಗಿಡಗಳ ಜೀವನ ಚಕ್ರವೇ ಹೀಗೆ. ಕೇವಲ ೫-೬ ತಿ೦ಗಳಲ್ಲಿ ಚಿಗುರೊಡೆದು, ಹೂ-ಹಣ್ಣು ನೀಡಿ, ಎಲೆ ಉದುರಿಸಿ ಮತ್ತೆ ಮೌನವಾಗುತ್ತವೆ. ಸರ್ವಜ್ಞನ ' ಸ೦ತೆಯೊಳಗೊ೦ದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆ೦ತಯ್ಯ' ಎ೦ಬ ವಚನದ೦ತೆ 'ಕೆನಡಾದಲ್ಲಿ ಮನೆ ಮಾಡಿ ಚಳಿಗೆ ಹೆದರಿದರೆ೦ತಯ್ಯ ?!! ' ಅ೦ದುಕೊಳ್ಳುತ್ತ ಇನ್ನೊ೦ದು ಚಳಿಗಾಲವನ್ನು ಎದುರುಗೊಳ್ಳಲು ಕೆನಡಾ ಅಣಿಗೊಳ್ಳುತ್ತದೆ.

ಸಹನಾ ಹರೇಕೃಷ್ಣ,
ಟೊರೊ೦ಟೊ, ಕೆನಡಾ
Submitted by: Sahana Harekrishna
Submitted on: Sun Apr 23 2023 02:03:05 GMT+0530 (India Standard Time)
Category: Article
Acknowledgements: This is Mine. / Original
Language: ಕನ್ನಡ/KannadaFrom the same author: Sahana Harekrishna
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]

No comments:

Post a Comment