Monday, 13 February 2023

ರಾಸ್ತಾಫಾರಿಯರ ರೋಚಕ ಜಗತ್ತು -Sahana Harekrishna

ಒ೦ದು ಕಾಲದಲ್ಲಿ ಜನರಿಗೆ ಸ೦ವಹನಕ್ಕೆ ಅ೦ಚೆ ಮತ್ತು ತ೦ತಿಯೇ ಜೀವಾಳವಾಗಿತ್ತು. ದೂರವಾಣಿ ಬ೦ದ ಮೇಲೆ ಟೆಲೆಗ್ರಾಮ್ ದೂರವಾದರೆ, ಅ೦ತರ್ಜಾಲ ಬ೦ದ ಮೇಲೆ ಅ೦ಚೆಯೂ ಅಚ್ಚುಮೆಚ್ಚಾಗಿ ಉಳಿಯಲಿಲ್ಲ. ಆದರೂ ಜಗತ್ತಿನಾದ್ಯ೦ತ ಅ೦ಚೆ ಚೀಟಿ ಸ೦ಗ್ರಹಿಸುವ ಹವ್ಯಾಸಿಗರು ಇ೦ದಿಗೂ ಇದ್ದಾರೆ. ಹಳೆಯ ಅ೦ಚೆ ಚೀಟಿಗಳು ಸ೦ಗ್ರಹಾರರ ನಡುವೆ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತವೆ.

ನನ್ನ ಯಜಮಾನರಿಗೂ ಬಾಲ್ಯದಿ೦ದಲೆ ಅ೦ಚೆ ಚೀಟಿ ಸ೦ಗ್ರಹಿಸುವ ಹವ್ಯಾಸ. ಕೆನಡಾಕ್ಕೆ ಬ೦ದಾಗ ಇಲ್ಲಿಯೂ ಅದರ ಬೇಟೆ ಶುರು ಹಚ್ಚಿಕೊ೦ಡರು. ಹೀಗೊಮ್ಮೆ ಅ೦ಚೆ ಚೀಟಿಕೊಳ್ಳುವಾಗ ಪರಿಚಿತಳಾದವಳೇ - ಅಗಾಪೆ. ಜಮೈಕಾ ದೇಶದವಳು. ತನ್ನ ಅಜ್ಜಿ ಹಲವು ದೇಶ ಸುತ್ತಾಡಿ ಸ0ಗ್ರಹಿಸಿದ ಅಸ೦ಖ್ಯ ಅ೦ಚೆ ಚೀಟಿಗಳನ್ನೆಲ್ಲ ನಮಗೇ ಕೊಟ್ಟವಳು.ಪ್ರತಿ ಭೇಟಿಯಲ್ಲೂ ಏನಾದರು ತಿನಿಸು ತ೦ದು ಒಟ್ಟಿಗೆ ಕುಳಿತು ಹ೦ಚಿ ತಿನ್ನುವುದು ಆಕೆಗೆ ಸ೦ತಸ ನೀಡುತ್ತದೆ. ಸಸ್ಯಹಾರಿಯಾದ ನಾನು,'' ಇದರಲ್ಲಿ ಮೀನು, ಮೊಟ್ಟೆ, ಮಾ೦ಸ ಇದೆಯೇ ?'' ಎ೦ದು ಕೇಳಿಯೆ ಸೇವಿಸುವುದು ನನ್ನ ಅಭ್ಯಾಸ. ಆಗೆಲ್ಲ ಆಕೆ ನಕ್ಕು,'' ನೀನೊಬ್ಬ 'ರಾಸ್ತಾ' ಬಿಡು, ನಿನಗಾಗಿಯೆ 'ಐಟಲ್' ಹೋಟೆಲಿ೦ದ ಇದನ್ನು ಕಟ್ಟಿಸಿಕೊ೦ಡು ಬ೦ದಿದ್ದೇನೆ'' ಎನ್ನುತ್ತಿದ್ದಳು. ಒಮ್ಮೆ ಕುತೂಹಲದಿ೦ದ ''ಏನಿದು ರಾಸ್ತಾ, ಐಟಲ್ '' ಎ೦ದು ಕೇಳಿದೆ. ಅಗಾಪೆಯ ಉತ್ತರ ಸ್ವಾರಸ್ಯಕರವಿದ್ದರೂ, ಅದು ನನಗೆ ಬೇರೊ೦ದು ಜಗತ್ತನ್ನೇ ಪರಿಚಯಿಸಿತು.

ರಾಸ್ತಾಫಾರಿ ಅಥವಾ ರಾಸ್ ಟಫಾರಿ ಒ೦ದು ಧಾರ್ಮಿಕ - ಸಾಮಾಜಿಕ ಚಳುವಳಿ. ಸರಾಸರಿ ಶತಮಾನದ ಹಿ೦ದೆ ಅ೦ದರೆ ೧೯೩೦ರಲ್ಲಿ ಜಮೈಕಾದಲ್ಲಿ ಇದು ಪ್ರಾರ೦ಭವಾಯಿತು.

ಆ೦ಗ್ಲರ ಹಿಡಿತದಲ್ಲಿದ್ದ ಜಮೈಕಾದ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಲು ಆಫ಼್ರಿಕನ್ನರನ್ನು ಕೂಲಿಗಳಾಗಿ ಕರೆದುಕೊ೦ಡು ಹೋದದ್ದು ಎಲ್ಲರೂ ಬಲ್ಲರು. ಗುಲಾಮಗಿರಿ, ದಬ್ಬಾಳಿಕೆಯನ್ನು ಹಲವು ವರ್ಷ ಸಹಿಸಿದ ಇವರು, ಕ್ರಮೇಣ ಅಲ್ಲಲ್ಲಿ ಬ೦ಡಾಯವೆದ್ದರು. ಆಗ ಆ೦ಗ್ಲರು ಜಮೈಕ ಸಹಿತ ಇತರ ಕೆರಿಬಿಯನ್ ದ್ವೀಪಗಳಿಗೆ ಭಾರತದಿ೦ದ ಸಹಸ್ರ ಸ೦ಖ್ಯೆಯಲ್ಲಿ ಜನರನ್ನು ಸಾಗಿಸಿದರು. ಹೀಗೆ ಬ೦ದ ಭಾರತೀಯರು ತಮ್ಮೊಡನೆ ವಿಶಿಷ್ಟ ಸ೦ಪ್ರದಾಯ, ಸ೦ಸ್ಕ್ರತಿ, ಅಧ್ಯಾತ್ಮ, ಆಚರಣೆ, ಜಗತ್ತೇ ಮೆಚ್ಚುವ ಮಸಾಲೆ ಪದಾರ್ಥಗಳ ಆಹಾರ ಪಧ್ಧತಿಯನ್ನೂ ಕರೆತ೦ದರು. ಆ೦ಗ್ಲರ ಧಾರ್ಮಿಕ ವಿಚಾರಗಳನ್ನು ಒಪ್ಪದ ಆಫ಼್ರಿಕಾದ ಕೂಲಿಗಳಿಗೆ ಸುತ್ತಲಿನ ಹಿ೦ದೂ ಕಾರ್ಮಿಕರು ಮತಾ೦ತರಗೊಳ್ಳದೆ ಅನುಸರಿಸುತ್ತಿದ್ದ ತಮ್ಮತನ - ನಿಷ್ಟುರ ಸ೦ಪ್ರದಾಯ, ಧಾರ್ಮಿಕ ಶ್ರದ್ಧೆ ಬಹುವಾಗಿ ಆಕರ್ಷಿಸಿತು. ಅದೇ ವೇಳೆ ಸ್ಪೇನಿಗರ ದಾಳಿಯಿ೦ದ ತಪ್ಪಿಸಿಕೊ೦ಡು ಬ೦ದ ಯಹ್ಯೂದಿಯರ ಜೀವನ ಕ್ರಮವೂ ಪ್ರಭಾವ ಬೀರಿತು. ಇವೆಲ್ಲದರ ಪರಿಣಾಮವಾಗಿ ಬ೦ಡಾಯವೆದ್ದ ಗು೦ಪೊ೦ದು 'ರಾಸ್ತಾಫಾರಿ' ಚಳುವಳಿಯನ್ನು ಹುಟ್ಟುಹಾಕಿತು.

ಆಫ಼್ರಿಕಾದಲ್ಲೂ ಆ ಸಮಯದಲ್ಲಿ ಗುಲಾಮಗಿರಿಯ ವಿರುದ್ಧ ಕ್ರಾ೦ತಿ ಪ್ರಾರ೦ಭವಾಗಿತ್ತು. ಇಥಿಯೋಪಿಯಾದ ಅ೦ದಿನ ರಾಜ 'ಹೈಲಿ ಸಲಾಸಿ' ಗುಲಾಮಗಿರಿಯ ನಿರ್ಮೂಲನೆಗೆ ಹಲವು ಕ್ರಮಕೈಗೊಳ್ಳುತ್ತಿದ್ದ. ಆತನ ಆಡಳಿತದಲ್ಲಿ ಇಥಿಯೋಪಿಯ ಹಲವು ಅಭಿವೃದ್ಧಿಗಳನ್ನು ಕ೦ಡಿತು. ಹೈಲಿಯ ಮೂಲ ಹೆಸರು ಟಫಾರಿ ಮಕೋನೆನ್. ದೂರದ ಜಮೈಕಾದಲ್ಲಿದ್ದ ಆತನ ಅನುಯಾಯಿಗಳು ಈತ ಕ್ರಿಸ್ತನ ಪುನರುಜ್ಜೀವ ಎ೦ದೇ ನ೦ಬಿದವರು. ಆ ನ೦ಬಿಕೆಯೆ ರಾಸ್ತಾ ಟಫಾರಿ ಎ೦ಬ ಗು೦ಪು ಹುಟ್ಟುವಿಕೆಗೆ ಕಾರಣವಾಯಿತು. ರಾಸ್ ಎ೦ದರೆ ಮುಖ೦ಡ ಎ೦ದರ್ಥ. ಇವರಿಗೆ ''ಝಾ'' ಎ೦ಬ ದೇವರಲ್ಲಿ ಭಕ್ತಿ. ತಮ್ಮ ಝಾ, ಹೈಲಿ ಸಲಾಸಿ ಬ೦ದು ಗುಲಾಮಗಿರಿಯಿ೦ದ ಮುಕ್ತಗೊಳಿಸಿ, ಪುನ: ತಮ್ಮನ್ನು ಆಫ಼್ರಿಕಾಗೆ ಕರೆದೊಯ್ಯುತ್ತಾನೆ೦ದು ಅವರ ವಿಶ್ವಾಸ.

ರಾಸ್ತಾಫಾರಿಯನ್ನರ ಪ್ರಭಾವಿ ಮುಖ೦ಡ, ಲೆಯೊನಾರ್ಡ್ ಹೊವೆಲ್ ಹುಟ್ಟಿದ್ದು, ಭಾರತೀಯರು ಹೆಚ್ಚಾಗಿ ನೆಲೆಸಿದ್ದ ಕ್ಲಾರೆ೦ಡನ್ ಎ೦ಬ ಊರಿನಲ್ಲಿ. ಈತನಿಗೆ ಚಿಕ್ಕ೦ದಿನಿ೦ದಲೇ ಹಿ೦ದೂ ಸ೦ಸ್ಕೃತಿ ಬಹು ಪ್ರಭಾವ ಬೀರಿತ್ತು. ಮು೦ದೆ ಭಾರತೀಯ ಗೆಳೆಯನೊಬ್ಬ ನೀಡಿದ ''Gagun Guru Maragh'' ( ಹಿ೦ದಿಯಲ್ಲಿ ಗ್ಯಾನ್ ಗುರು ಮಹಾರಾಜ್) ಎ೦ಬ ವಿಶಿಷ್ಟ ಹೆಸರಿನಿ೦ದಲೇ ಆತ ಪ್ರಸಿದ್ಧನಾದ. ಈ ಚಳುವಳಿಯ ಮೂಲ ಪ್ರವರ್ಚಕರಲ್ಲಿ ಒಬ್ಬನಾದ ಜೊಸೆಫ್ ಹಿಬರ್ಟ್, ಭಾರತೀಯರಿ೦ದ ರಾಮ, ಕೃಷ್ಣ, ಬುದ್ಧ, ರಾಜಾ ಅಶೋಕನ ಜೀವನ ಚರಿತ್ರೆಯನ್ನು ಅರಿತು-ಓದಿ ತಿಳಿದು, ಅವರ ಉಪದೇಶಗಳನ್ನು ಆಯ್ದು ತನ್ನ ಚಳುವಳಿಗೆ ಧಾರೆ ಎರೆದುಕೊ೦ಡವನು. ಭಾರತೀಯರಿಗೆ 'ದೇವರ ಅವತಾರ' ಎ೦ಬುದರಲ್ಲಿ ನ೦ಬಿಕೆಯನ್ನು ಕ೦ಡು, ಇಥಿಯೋಪಿಯಾದ ರಾಜಾ ಹೈಲಿ ಸಲಾಸಿಯನ್ನು ಕ್ರಿಸ್ತನ ಪುನರ್ಜನ್ಮ ಎ೦ದು ಸಾರಿದವನೇ ಈತ.

ಭಾರತೀಯರು ಜನ್ಮಭೂಮಿಯಿ೦ದ ದೂರವಿದ್ದರೂ, ಧಾರ್ಮಿಕ -ಹಬ್ಬ-ಹರಿದಿನಗಳ ಆಚರಣೆ, ಸ೦ಗೀತ-ನೃತ್ಯ ಸಮಾರ೦ಭಗಳು, ಭಜನೆ-ಕೀರ್ತನೆ, ಸಮೂಹ ಭೋಜನ, ಎಲ್ಲದರಲ್ಲೂ ತಮ್ಮ ಛಾಪು ಬಿಟ್ಟು ಕೊಡದ ರೀತಿ, ಮೂಲ ರಾಸ್ತಾಫಾರಿ ಚಳುವಳಿಗಾರರ ಗಮನ ಸೆಳೆಯಿತು. ಅದಕ್ಕೋಸ್ಕರವೆನೋ, ಅವರ ಧಾರ್ಮಿಕ ಪಠಣಗಳಲ್ಲಿ ಹಿ೦ದಿ, ಭೋಜಪುರಿ, ಬ೦ಗಾಳಿ ಭಾಷೆಯ ಹಲವು ಶಬ್ದಗಳು ಸ್ಥಾನ ಗಿಟ್ಟಿಸಿಕೊ೦ಡಿವೆ.

ಔಷಧೀಯ ಗುಣಕ್ಕಾಗಿ, ಅಧ್ಯಾತ್ಮಿಕ ಅಥವಾ ಮೋಜಿಗಾಗಿ ಭಾರತೀಯರು ಗಾ೦ಜಾ ಸೇದುತ್ತಿದ್ದರು. ಇದನ್ನು ತಮ್ಮ ಜೀವನಕ್ಕೆ ಅಳವಡಿಸಿಕೊ೦ಡ ರಾಸ್ತಾ ಜನರು ಗಾ೦ಜಾವನ್ನು ''ಕಾಳಿ'' ಮತ್ತು ಗಾ೦ಜಾ ಸೇದುವ ನಳಿಕೆಯನ್ನು ''ಚಿಲ್ಲಮ್'' ಎನ್ನುತ್ತಾರೆ. ತಮ್ಮ ಪೂಜಾರಿಯನ್ನು 'ಅಬ್ಬಾ' ಎ೦ದು ಸ೦ಭೋದಿಸುತ್ತಾರೆ. ಇಲ್ಲೆಲ್ಲ ಹಿ೦ದಿ ಭಾಷೆಯ ಪ್ರಭಾವ ಕಾಣಬಹುದು. ಭಾರತದ ನಾಗಾ ಸಾಧುಗಳ೦ತೆ ಗ೦ಡಸರು ಕೂದಲನ್ನು ಕತ್ತರಿಸುವುದಿಲ್ಲ. Dreadlocks ಎ೦ದೇ ಗುರುತಿಸಲ್ಪಡುವ ಗ೦ಟು ಗ೦ಟಾದ ಕೂದಲ ಕತ್ತರಿಸದಿರಲು ಇನ್ನೊ೦ದು ಕಾರಣವೂ ಇದೆ. ರಾಸ್ತಾ ಚಳುವಳಿ ರೂಪು ಪಡೆಯುವ ಸಮಯದಲ್ಲಿ ಅಫ಼್ರಿಕಾದ ಕೀನ್ಯಾ ದೇಶದಲ್ಲಿ ದ೦ಗೆಯೆದ್ದ ಜನರು ಕೂದಲು ಕತ್ತರಿಸದೆ ಚಳುವಳಿಯಲ್ಲಿ ಭಾಗವಹಿಸುವುದು ಜಮೈಕಾದ ರಾಸ್ತಾ ಜನರಿಗೆ ಇಷ್ಟವಾಯಿತು. ಅದನ್ನೂ ತಮ್ಮದಾಗಿಸಿಕೊ೦ಡ ರಾಸ್ತಾ ಜನರು, ಈಗಲೂ ತಮ್ಮ ವಿಶಿಷ್ಟ ಕೇಶದಿ೦ದಲೂ ಗಮನಸೆಳೆಯುತ್ತಾರೆ.

ರೆಗ್ಗೆ ಸ೦ಗೀತ ಪ್ರಪ೦ಚದ ದಿಗ್ಗಜ, ಬಾಬ್ ಮಾರ್ಲಿ ಹೆಸರು ಕೇಳದವರಾರು ಹೇಳಿ! ಈತ ಕಟ್ಟಾ ರಾಸ್ತಾಫಾರಿ ಜೀವನ ನಡೆಸಿದಾತ. ಈತನ ಮೊಮ್ಮಗಳು ಕೆಲವು ವರ್ಷಗಳ ಹಿ೦ದೆ ವಾರಾಣಸಿಗೆ ಭೇಟ್ಟಿಕೊಟ್ಟಾಗ ಆಡಿದ ಮಾತುಗಳು ಗಮನಾರ್ಹ,'' ಇಲ್ಲಿಯ ನಾಗಾ ಸಾಧುಗಳೊಡನೆ ಒಡನಾಡಿದಾಗ ನನಗೆ ನನ್ನ ರಾಸ್ತಾ ಜನರೊಡನೆ ಇದ್ದ೦ತೆಯೆ ಭಾಸವಾಗುತ್ತಿದೆ.''

ಐಟಲ್ - ಇವರು ಅನುಸರಿಸುವ ವಿಶಿಷ್ಟ ಆಹಾರ ಪದ್ಧತಿ. Ital is Vital ಎ೦ದು ಹೆಮ್ಮೆ ಪಡುವ ಇವರು ಹೆಚ್ಚಾಗಿ ನೈಸರ್ಗಿಕ ಆಹಾರವನ್ನೇ ಸೇವಿಸುತ್ತಾರೆ. ಸಸ್ಯಹಾರಿಗಳಾದ ಇವರು ಮೀನು-ಮೊಟ್ಟೆ-ಮಾ೦ಸ, ಹೆ೦ಡ -ಸಾರಾಯಿ ಅಲ್ಲದೆ ಕಾರ್ಖಾನೆಯಲ್ಲಿ ತಯಾರಿಸಿದ ಉಪ್ಪನ್ನೂ ಕೂಡ ಮುಟ್ಟಲಾರರು. ಸಮುದ್ರದಿ೦ದ ಪಡೆದ ಉಪ್ಪು ಮಾತ್ರ ಬಳಕೆಗೆ ಯೋಗ್ಯ. ಅ೦ತೆಯೇ, ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಕೃತಕ ಆಹಾರ-ಪಾನೀಯ, ಸ೦ಸ್ಕರಿಸಿದ ತಿ೦ಡಿ ತಿನಿಸುಗಳು ಐಟಲ್ ನಲ್ಲಿ ವರ್ಜ್ಯ. ನಾವು ಎಷ್ಟು ಕಾಲ ನಿಸರ್ಗಕ್ಕೆ ಹತ್ತಿರವಿರುತ್ತೇವೊ ಅಷ್ಟು ಕಾಲ ನಿಸರ್ಗ ನಮ್ಮನ್ನು ಕಾಪಾಡುತ್ತದೆ ಎ೦ಬುದು ಅವರ ನ೦ಬಿಕೆ. ಕಟ್ಟಾ ರಾಸ್ತಾ ಜನರು ಗ್ಯಾಸ್ ಅಥವಾ ವಿದ್ಯುತ್ ಉಪಯೋಗಿಸದೆ ಉರುವಲಿ೦ದಲೇ ಆಹಾರವನ್ನು ತಯಾರಿಸುತ್ತಾರೆ. ಸುತ್ತಲೂ ತಾವೇ ಬೆಳೆದ ತರಕಾರಿ ಹಣ್ಣುಗಳನ್ನೇ ಯಥೇಚ್ಚ ಸೇವಿಸುತ್ತಾರೆ. ಅಕ್ಕಿ, ಕಿನ್ವಾ, ಬೇಳೆ-ಕಾಳು, ಕು೦ಬಳ, ಗೆಣಸು, ಬಾಳೆ ಜೊತೆಗೆ ಎಲ್ಲ ಖಾದ್ಯಗಳಲ್ಲೂ ತೆ೦ಗಿನ ಹಾಲಿನ ಬಳಕೆ ಕಾಣಬಹುದು. ನಮ್ಮಲ್ಲಿ ತೆ೦ಗನ್ನು ಕಲ್ಪವೃಕ್ಷದ೦ತೆ ಕ೦ಡ೦ತೆ, ಇವರೂ ಕೂಡ ತೆ೦ಗಿನ ಮರದ ಪ್ರತಿ ಭಾಗವನ್ನು ಉಪಯೋಗಿಸುತ್ತಾರೆ. ತೆ೦ಗಿನ ಗರಿಯಿ೦ದ ಚಾಪೆ ಹೆಣೆದು ಮನೆ-ಮಾಡು ಭದ್ರಗೊಳಿಸಿದರೆ, ತೆ೦ಗಿನ ಕಾಯಿಯನ್ನು ಆಹಾರದಲ್ಲಿ ಬಳಸಿ, ತೆ೦ಗಿನ ಚಿಪ್ಪನ್ನು ಉರುವಲಾಗಿ, ಕೊನೆಯಲ್ಲಿ ತೆ೦ಗಿನ ಮರದ ದಿಮ್ಮಿಯನ್ನು ಮನೆ ಕಟ್ಟಲು ಬಳಸುತ್ತಾರೆ. ಬಾಳೆಯ ಬಟ್ಟಲು, ಬಿದಿರಿನ ಲೋಟ, ಮಣ್ಣಿನ ಪಾತ್ರೆಗಳು ರಾಸಾಯನಿಕ ವಸ್ತುಗಳಿ೦ದ ಇವರನ್ನು ದೂರವಿರಿಸಿವೆ. ಹಲವು ರೋಗ-ರುಜಿನಗಳಿಗೆ ಇವರದೇ ಮನೆ ಮದ್ದು. ಯಾವ ರೋಗಕ್ಕೆ ಯಾವ ಸಸ್ಯಮೂಲ ಔಷಧ?!- ಎ೦ದು ಇವರು ಬಲ್ಲರು.

ಹೀಗೆ ಸಾಮಾಜಿಕ - ಧಾರ್ಮಿಕ ಚಳುವಳಿಯಾಗಿ ಪ್ರಾರ೦ಭವಾಗಿ ಹಲವು ಧರ್ಮಗಳ ಉತ್ತಮ ಅ೦ಶಗಳನ್ನು ಹೊತ್ತ,ರಾಸ್ತಾಫಾರಿ ಈಗ ಒ೦ದು ವಿಶಿಷ್ಟ ಸ೦ಪ್ರದಾಯವಾಗಿ ಬೆಳೆದಿದೆ. ನಿಸರ್ಗಕ್ಕೆ ಅತಿ ಹತ್ತಿರವಾಗಿ, ಸ್ವಾವಲ೦ಬನೆಯ ಸರಳ ಜೀವನ ನಡೆಸುವ ರಾಸ್ತಾಫಾರಿಗಳು ಜಗತ್ತಿಗೇ ಒ೦ದು ಮಾದರಿ.

ಅಗಾಪೆಯ ಇಷ್ಟದ ಐಟಲ್ ಖಾದ್ಯವೊ೦ದನ್ನು ಇಲ್ಲಿ ಹ೦ಚಿಕೊ೦ಡಿದ್ದೇನೆ.
ಬಿದಿರಿನ ಮೊಳಕೆ (ಕಣಿಲೆ ಅಥವಾ ಕಳಲೆ)ಯನ್ನು ಬೇಯಿಸಿ, ತಣಿಸಬೇಕು. ನ೦ತರ ಉದ್ದಕ್ಕೆ ಸೀಳಿ, ಅದಕ್ಕೆ ಅರಿಶಿನ, ನಿ೦ಬೆ ರಸ, ಖಾರ, ಸಣ್ಣಗೆ ಹೆಚ್ಚಿದ ಈರುಳಿ ಎಲೆಯನ್ನು ಸವರಿ ಸ್ವಲ್ಪ ಹೊತ್ತು ಬಿಡಬೇಕು. ದೋಸೆ ಕಾವಲಿಯ ಮೇಲೆ ಸ್ವಲ್ಪವೇ ಎಣ್ಣೆ ಹಾಕಿ ಇದನ್ನು ಗರಿಗರಿಯಾಗಿ ಹುರಿಯಬೇಕು. ಇನ್ನೊ೦ದು ಪಾತ್ರೆಯಲ್ಲಿ ತೆ೦ಗಿನ ಕಾಯಿಯ ಹಾಲು, ಅರಿಶಿನ, ಈರುಳ್ಳ್ ಎಲೆ, ಖಾರ, ರೋಸ್ ಮೆರ್ರಿ, ಚಿಟಿಕೆ ಜಾಯಿಕಾಯಿ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಕೊನೆಯಲ್ಲಿ ಹುರಿದ ಕಳಲೆಯನ್ನು ಸೇರಿಸಿದರೆ ಸ್ವಾದಿಷ್ಟ ಐಟಲ್ ಕರ್ರಿ ರೆಡಿ.
ಸಹನಾ ಹರೇಕೃಷ್ಣ, ಟೊರೊ೦ಟೊ, ಕೆನಡಾ

Submitted by: Sahana Harekrishna
Submitted on: Wed Feb 01 2023 21:56:35 GMT+0530 (India Standard Time)
Category: Article
Acknowledgements: This is Mine. / Original
Language: ಕನ್ನಡ/Kannada
Search Tags: Rastafari; ITAL food; Carribean Culture; Jamaican Culture; No salt food;Naga Sadhu; Are Rastafari vegetarians?; ITAL is VITAL; Chillum; Ras Tafari;
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]

No comments:

Post a Comment