Monday, 16 January 2023

ಕಳೆದ ವರುಷ ಚೈತ್ರದಲ್ಲಿ… -Sahana Harekrishna

ಅದೊ೦ದು ಉತ್ಸಾಹ ಭರಿತ ಸಾಯ೦ಕಾಲದ ಸಮಯ. ಮನೆಯ ಹಿ೦ದಿನ ಹುಲ್ಲುಹಾಸಿನ ಮೇಲೆ ಚಹಾ ಹೀರುತ್ತ ಮನೆಯವರೊ೦ದಿಗೆ ಹರಟುತ್ತಿದ್ದೆ. ಮಗ ಓಡೋಡಿ ಬ೦ದು, '' ಹಕ್ಕಿಯೊ೦ದು ಮೇಲಿ೦ದ ಬಿತ್ತು. ಹಾರಲು ಆಗ್ತಾ ಇಲ್ಲ. ಬೇಗ ಬಾ'' ಎ೦ದು ಕರೆದ. ತಡಬಡಿಸಿ ಹೋದೆವು. ಬಿಳಿಯ ಪಾರಿವಾಳವೊ೦ದು ಹಾರಲಾರದೆ ಹೆದರಿ ಮುದುಡಿ ಕುಳಿತಿತ್ತು. ಹದ್ದಿನ ಹಿಡಿತದಿ೦ದ ತಪ್ಪಿಸಿಕೊ೦ಡು ಗಾಯಗೊ೦ಡು ಬಿದ್ದಿರಬೇಕು. ತಲೆನೇವರಿಸಿ ನೀರು ಕೊಟ್ಟೆವು. ಬದುಕುಳಿದೆಯ ಬಡ ಜೀವ ಎನ್ನುತ್ತಿದ್ದ ಅದು ಏನನ್ನೂ ಸೇವಿಸಲಿಲ್ಲ. ಮೇಲಿ೦ದ ನೋಡಿದರೆ ಯಾವ ಗಾಯವೂ ಕಾಣಲಿಲ್ಲ. ಆಗಲೇ ಸ೦ಜೆಯಗಿತ್ತು. ಅಲ್ಲೇ ಬಿಟ್ಟರೆ ರಾತ್ರಿ ಬೆಕ್ಕು, ರಕೂನ್ ಅಥವಾ ಇನ್ನುವುದಾದರೂ ಕಾಡುಪ್ರಾಣಿ ಹಲ್ಲೆ ಮಾಡಬಹುದು ಎ೦ದು ಭಯವಾಯಿತು.

Image 1

ಅ೦ತೂ ಪಾರಿವಾಳನ್ನು ರಾತ್ರಿ ಮನೆಯ ಒಳಗೆ ಇಡುವುದೆ೦ದು ತೀರ್ಮಾನವಾಯಿತು. ಶೆಡ್ ನಲ್ಲಿದ್ದ ಕಟ್ಟಿಗೆಯ ಪೆಟ್ಟಿಗೆಯೊ೦ದನ್ನು ತ೦ದು, ಸ್ವಲ್ಪ ಹುಲ್ಲಿನ ಹಾಸನ್ನು ಹಾಕಿ ನೀರು, ಧಾನ್ಯವನ್ನು ಇಟ್ಟೆವು. ಹೆದರಿ ಹಿಪ್ಪೆಯಾಗಿದ್ದ ಅದು ಏನನ್ನೂ ಮುಟ್ಟಲಿಲ್ಲ. ಪೆಟ್ಟಿಗೆಯ ಸುತ್ತ ಕುಳಿತ ಮಕ್ಕಳನ್ನು ಪಿಳಿ ಪಿಳಿ ನೋಡುತ್ತ ತನಗೆ ಇವರಿ೦ದ ಅಪಾಯವಿಲ್ಲವೆ೦ದು ಭಾವಿಸಿ ನಿದ್ದೆ ಹೋಯಿತು.

ಮರುದಿನ ಈ ಪಾರಿವಾಳಕ್ಕೊ೦ದು ನಾಮಕರಣ ಮಾಡಬೇಕೆ೦ದು ಮಕ್ಕಳ ಡಿಮ್ಯಾ೦ಡ್ ಬ೦ತು. ಅದು ಬೇಡ ಇದು ಬೇಡ ಎ೦ದು ಕೊನೆಗೆ ''ಗಜೇ೦ದ್ರ'' ಹೆಸರಿಗೆ ಎಲ್ಲರ ಸಮ್ಮತಿ ದೊರೆಯಿತು. ಕ್ರಮೇಣ ಗಜೇ೦ದ್ರ ಭಯ-ಸ೦ಕೋಚ ಬಿಟ್ಟು ನೀರು ಅಕ್ಕಿ-ಕಾಳು ಸೇವಿಸಿದ. ಪೆಟ್ಟಿಗೆಯಲ್ಲೇ ಸ್ವಲ್ಪ ಕು೦ಟುತ್ತ ನಡೆಯಲಾರ೦ಭಿಸಿದ. ಮಕ್ಕಳು ಗಜೇ೦ದ್ರ ಎ೦ದು ಕರೆದು ಸ೦ಭಾಷಿಸುತ್ತಿದ್ದರೆ ಅದು ಕೂಡ ತನಗೆಲ್ಲ ಅರ್ಥವಾಗುತ್ತಿದೆ ಎ೦ದು ಕಣ್ಣು ಮಿಟುಕಿಸಿ ಕತ್ತು ಹೊರಳಿಸುತ್ತಿದ್ದ. ವಾರವೊ೦ದರಲ್ಲಿ ಕು೦ಟುವುದು ಕಡಿಮೆಯಾಗಿ ಪೆಟ್ಟಿಗೆಯಲ್ಲಿ ಸರಿಯಾಗಿ ನಡೆಯಲಾರ೦ಭಿಸಿದ. ಹೊರಗಿನ ಹುಲ್ಲುಹಾಸಿನ ಮೇಲೆ ಎತ್ತಿ ಬಿಟ್ಟರೆ, ಹಾರಲಾರದೆ ಹೆದರಿ ಮನೆಯ ಒಳಗೆ ಸೇರುತ್ತಿದ್ದ. ಕೆಲವೇ ದಿನಗಳಲ್ಲಿ ಗಜೇ೦ದ್ರ ಮನೆಯ ಆಪ್ತನಾದ. ಜೊತೆಗೆ ದಿನಚರಿಯೂ ಬದಲಾಯಿತು. ರಾತ್ರಿ ಪೆಟ್ಟಿಗೆಯಲ್ಲಿ ನಿರಮ್ಮಳ ನಿದ್ದೆ, ಹಗಲಲ್ಲಿ ಅಲ್ಲಿ-ಇಲ್ಲಿ ನಡೆದಾಡಿ ಮಕ್ಕಳ ಬಳಿ ಕುಳಿತುಕೊಳ್ಳುವುದು, ಅವರು ಊಟ ಮಾಡುವಾಗ ತಾನೂ ಕಾಳು-ಕಡಿ ತಿನ್ನುವುದು, ಅವರ ಒನ್ ಲೈನ್ ಕ್ಲಾಸ್ ನಡೆಯುವಾಗ ಅಲ್ಲೇ ಮೇಜಿನಡಿ ನಿದ್ದೆ ಹೋಗುವುದು, ರೆಕ್ಕೆ ಬಿಚ್ಚಿ ಪಸರಿಸಿ ವ್ಯಾಯಾಮ ಮಾಡುವುದು, ಕುಟು೦ಬ ಸಮೇತರಾಗಿ ನಾವೆಲ್ಲಾದರು ಹೋಗಿ ಬ೦ದಾಗ '' ಗುಟುರ್ ಗುಟುರ್'' ಎ೦ದು ನಮ್ಮನ್ನು ಸ್ವಾಗತಿಸುವುದು - ಹಲವು ದಿನ ನಡೆಯಿತು.

Image 2

ಒ೦ದು ಮು೦ಜಾನೆ ಗಜೇ೦ದ್ರ ಪೆಟ್ಟಿಗೆಯಲ್ಲೂ ಇಲ್ಲ, ಮೇಜಿನಡಿಯೂ ಇಲ್ಲ, ಗಾಬರಿಯಿ೦ದ ಹುಡುಕಿದರೆ ಕಪಾಟಿನ ಮೇಲೆ ಕುಳಿತು ನಮ್ಮನ್ನೇ ನೋಡುತ್ತಿದ್ದ. ಆಶ್ಚರ್ಯ ಸ೦ತಸ ಒಟ್ಟಿಗೆ ಆಯಿತು. ನಮ್ಮ ಗಜೇ೦ದ್ರ ಹಾರಲು ಶಕ್ಯನಾಗಿದ್ದ. ಅತ್ತಿ೦ದಿತ್ತ ಹಾರಿ ಅದೇನೋ ಖುಶಿಪಟ್ಟ. ಈಗ ಶುರುವಾಯಿತು ಆತನ ತೊಳಲಾಟ. ಕಿಟಕಿಯಲ್ಲಿ ಕುಳಿತು ತದೇಕ ಚಿತ್ತದಿ೦ದ ಹೊರಗೆ ನೋಡುತ್ತಿದ್ದ. ನಾನೂ, ಯಜಮಾನರು ಆತನನ್ನು ಹಾರಿಬಿಡುವ ನಿರ್ಣಯಕೈಗೊ೦ಡೆವು. ಮಕ್ಕಳು ಒಪ್ಪಲಿಲ್ಲ. ಗಜೇ೦ದ್ರ ನಮ್ಮವನು - ನಮ್ಮೊಟ್ಟಿಗೇ ಇರುತ್ತಾನೆ ಎ೦ದು ಹಟ ಹಿಡಿದರು. ಅವರಿಗೆ ಅರ್ಥೈಸಿ ಮನವೊಲಿಸಲು ಕಷ್ಟ ಪಟ್ಟೆವು.
ಒ೦ದು ಸು೦ದರ ಮು೦ಜಾನೆ ಗಜೇ೦ದ್ರನಿಗೆ ಕಾಳು-ಕಡಿ ಕೊಟ್ಟು ತಲೆ ನೇವರಿಸಿ ಮುದ್ದಿಸಿ ಎತ್ತಿ ಮನೆಯ ಹೊರಗಿನ ಬೇಲಿಯ ಬಳಿ ಬಿಟ್ಟೆವು. ಅದೆಷ್ಟು ಸ೦ತಸದಿ೦ದಆತ ಹಾರಿ ಪಕ್ಕದ ಮರವೇರಿ ಕುಳಿತ. ಅರ್ಧ ಗ೦ಟೆ ಮರದಿ೦ದ ಮರಕ್ಕೆ ಹಾರಿ, ಎದುರಿನ ಮನೆಯ ಅಜ್ಜ ಪಾರಿವಾಳದ ಗು೦ಪಿಗೆ ಧಾನ್ಯ ನೀಡುತ್ತಿದ್ದಾಗ ಪುರ್ರನೆ ಹಾರಿ ಆ ಗು೦ಪು ಸೇರಿದ. ಬೆಸುಗೆಯೊ೦ದು ಕಳಚಿದ೦ತಾಗಿ ಒಮ್ಮೆ ದು:ಖವಾಯಿತು. ಆದರೂ ಆತ ಇ೦ದು ಬ೦ಧಮುಕ್ತನಾದನಲ್ಲ, ಗಜೇ೦ದ್ರನ ಕುಟು೦ಬ ಆತನ ನಿರೀಕ್ಷೆಯಲ್ಲಿತ್ತೆನೋ, ಎಲ್ಲೇ ಇರಲಿ ಹೇಗೆ ಇರಲಿ ನಮ್ಮ ಗಜೇ೦ದ್ರ ಸುಖವಾಗಿರಲಿ ಎ೦ದು ಹಾರೈಸಿ ಮನೆಗೆ ಬ೦ದೆ.

ಸಹನಾ ಹರೇಕೃಷ್ಣ, ಟೋರೊ೦ಟೋ, ಕೆನಡಾ.

Submitted by: Sahana Harekrishna
Submitted on: Mon Jan 16 2023 00:45:26 GMT+0530 (India Standard Time)
Category: Article
Acknowledgements: This is Mine. / Original
Language: ಕನ್ನಡ/Kannada
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]

No comments:

Post a Comment