ಹೈಗುಂದ ಎಂದಾಕ್ಷಣ ನೆನಪಾಗುತ್ತಿದ್ದದ್ದು- ದೋಣಿ. ಅಜ್ಜನ ಮನೆಗೆ ಹೋಗಬೇಕೆಂದರೆ ದೋಣಿ ದಾಟಲೇ ಬೇಕಿತ್ತು. ಶರಾವತಿಯ ಕೆಲವೇ ಜನವಸತಿ ದ್ವೀಪಗಳಲ್ಲಿ ಇದು ಒಂದು ಸುಂದರ ದ್ವೀಪವಾಗಿತ್ತು. ಇತ್ತೀಚೆಗೆ ಭೂಮಾರ್ಗವಾಗಿ ಸಂಪರ್ಕ ಕಲ್ಪಿಸಿಕೊಂಡು ದ್ವೀಪದ ಸ್ಥಾನಮಾನ ಕಳೆದುಕೊಂಡಿದೆ.
ಎಂಬತ್ತರ ದಶಕ. ಹೊನ್ನಾವರ- ಗೇರಸೊಪ್ಪಗಳ ನಡುವೆ ಅಷ್ಟೊಂದು ಬಸ್ಸು ಟೆಂಪೋಗಳ ಓಡಾಟ ಇರಲಿಲ್ಲ. ಗೇರುಸೊಪ್ಪೆಗೆ ಹೋಗುವ ಬಸ್ಸಿಗಾಗಿ ಮುಂಚೆಯೇ ಹೋಗಿ ಬಸ್ ನಿಲ್ದಾಣದಲ್ಲಿ ಕಾಯಬೇಕಿತ್ತು. ಕಿತ್ತಳೆ ಹಣ್ಣನ್ನು ಮಾರುತ್ತಿದ್ದ ಚಂದ್ರು, ‘ ತಂಗಿ ಎಲ್ಲಿಗೆ ಹೋಗುತ್ತೀ ’ ಎಂದು ಕೇಳಿದರೆ ಸಂಕೋಚದಿಂದ ನಾನು ಉತ್ತರಿಸಿದೆ ಅಪ್ಪ,’ ಹೈಗುಂದಕ್ಕೋ’ ಎನ್ನುತ್ತಿದ್ದರು. ‘ ಗೇರುಸೊಪ್ಪ ಬಸ್ಸಿಗೆ ಇನ್ನೂ ಬೋರ್ಡ್ ಹಾಕಿಲ್ಲ,’ ಎಂದು ಪಕ್ಕನೆ ಆತ ಹೇಳಿದರೆ ಹೌದೆಂದು ಅಪ್ಪ ಚಹಾ ಕುಡಿಯಲು ಕ್ಯಾಂಟೀನಿಗೆ ದೌಡಾಯಿಸುತಿದ್ದರು. ಕ್ಯಾಂಟೀನಿನಲ್ಲಿ ಅಪ್ಪ ಬಿಸಿ ಚಹಾ ಹೀರುತ್ತಿದ್ದರೆ ನನ್ನ ಕಣ್ಣುಗಳು ಅಲ್ಲಿ ಸಾಲಾಗಿ ಇರಿಸಿದ್ದ ಬಣ್ಣಬಣ್ಣದ ಲಿಮ್ಕಾ- ಬಾಜಲ್ ಬಾಟಲಿಗಳ ಮೇಲೆ. ಅಪ್ಪ ಅವನ್ನೆಲ್ಲ ಕೊಡಿಸುವುದೇ ಇಲ್ಲವೆಂದು ಕೇಳುವ ಗೋಜಿಗೆ ಹೋಗುತ್ತಿರಲಿಲ್ಲ. ಕ್ಯಾಂಟೀನ್ ಅಶೋಕರ ಕೈಯಲ್ಲಿ ಹಣ ಪಾವತಿಸಿ ಅಪ್ಪ ಹೋಗುತ್ತಿದ್ದದ್ದು ಪೇಪರ್ ಜಿ ಕೆ ಪ್ರಭು ಅಂಗಡಿಗೆ. ಅಪ್ಪ ದಿನಪತ್ರಿಕೆ ತೆಗೆದುಕೊಳ್ಳುವುದರಲ್ಲಿ ನಾನು ಅಮರಚಿತ್ರಕಥೆ ಪುಸ್ತಕಗಳನ್ನು ಕಣ್ಣಾಯಿಸುತ್ತಿದ್ದೆ. ಚಂದಮಾಮ- ಬಾಲಮಂಗಳ ಯಾವುದಾದರೊಂದು ಕಥೆ ಪುಸ್ತಕ ಅಪ್ಪ ತೆಗೆದುಕೊಳ್ಳುತ್ತಿದ್ದರು. ಆಗ ಪಕ್ಕದ ಅಂಗಡಿಯಲ್ಲಿ ‘ಪಾಪಿನ್ಸ್’ ಬೇಕೆಂದು ಅಪ್ಪನ ಶರ್ಟ್ ಎಳೆಯುತ್ತಿದ್ದೆ. ‘ ಎರಡು ಪಾಪಿನ್ಸ್ ಕೊಡಿ’ ಎಂದು ಅಪ್ಪ ಹೇಳಿದರೆ, ‘ ನನಗೆ ಬೇಡ’ ಎಂದು ಅಣ್ಣನ ಅಂಬೋಣ. ‘ ನಿನಗೆ ಬೇಡವಾದರೆ ನನಗೆ ಕೊಡು’ ಎಂದು ನಾನು ಅವನ ಕಿವಿಯಲ್ಲಿ ಉಸುರುತ್ತಿದ್ದೆ. ಅದನ್ನು ಕೇಳಿ ಅಪ್ಪ ಒಂದು ನನ್ನ ಕೈಯಲ್ಲಿತ್ತು ಇನ್ನೊಂದನ್ನು ಕಿಸೆಯಲ್ಲಿಟ್ಟರೆ ‘ ಅದು ಯಾರಿಗೆ’ ಎಂದು ಯೋಚಿಸುವುದರಲ್ಲಿ ಚಂದ್ರುವಿನ ‘ಗೇರುಸೊಪ್ಪ ಗೇರುಸೊಪ್ಪ’ ಕೂಗನ್ನು ಕೇಳಿ ಬಸ್ಸಿನೆಡೆಗೆ ಓಡುತ್ತಿದ್ದೆವು. ಕಿಟಕಿಯ ಸೀಟು ದೊರಕಿದರೆ ತಲೆಯ ಮೇಲೆ ಕೋಡು ಮೂಡಿದಂತೆಯೇ !
ಪಾಪಿನ್ಸ್ ಒಂದೊಂದೇ ಮೆಲ್ಲುತ್ತಾ ಹೊರಗೆ ನೋಡುತ್ತಿದ್ದಂತೆ ಕಂಡಕ್ಟರ್’ ಟಿಕೆಟ್ ಟಿಕೆಟ್’ ಎಂದರೆ ಅಪ್ಪ ಕಿಸೆಯಿಂದ ಹಣ ತೆಗೆದು ‘ ಎರಡು ಫುಲ್ ಒಂದು ಹಾಫ್ ಅಳ್ಳಂಕಿ ಕೊಡಿ’ ಎಂದಾಗ ಕಂಡಕ್ಟರ್ ಕನ್ನಡಕದ ಮೇಲಿಂದ ಹಾಫ್ ಟಿಕೆಟ್ ಯಾರಿಗೆ ಎಂದು ನನ್ನನ್ನು ಅಣ್ಣನನ್ನು ನೋಡುತ್ತಿದ್ದರು. ಅಪ್ಪ ದಿನವೂ ಕವಲಕ್ಕಿಗೆ ಹೋಗಿಬಂದು ಮಾಡುತ್ತಿದ್ದರಿಂದ ಆ ಮಾರ್ಗದ ಎಲ್ಲ ಚಾಲಕ ನಿರ್ವಾಹಕರು ಅಪ್ಪನಿಗೆ ಪರಿಚಿತರು. ‘ ಹೈಗುಂದಕ್ಕೊ ? ‘ ಎಂಬ ಅವರ ಪ್ರಶ್ನೆಯಲ್ಲೇ ಉತ್ತರವೂ ಇರುತ್ತಿತ್ತು. ಬಸ್ಸು ಆರೋಳ್ಳಿಯ ತಿರುವಿನಲ್ಲಿ ಘಟ್ಟ ಇಳಿದರೆ ‘ ಅಯ್ಯೋ ಬಸ್ಸು ಬಿದ್ದರೆ’ ಎಂಬ ಭಯ ನನ್ನಲ್ಲಿತ್ತು. ಭಾಸ್ಕೇರಿ , ಕವಲಕ್ಕಿ, ಹಡಿನಬಾಳ, ಖರ್ವ , ದಿಬ್ಬಣಗಲ್ ದಾಟಿ ಅಳ್ಳಂಕಿ ಯಲ್ಲಿ ಬಸ್ಸಿಳಿದು ಶರಾವತಿಯೆಡೆಗೆ ನಡೆಯುತ್ತಿದ್ದೆವು.
ದಾರಿಯಲ್ಲಿ ಸಿಕ್ಕ ಜನರೆಲ್ಲ ‘ ,ಸಣ್ಣ ಒಡೆದಿರು ,ತಂಗಿ ‘ ಎಂದೆಲ್ಲ ಪ್ರೀತಿಯಿಂದ ಮಾತನಾಡಿಸುವವರು. 5 ನಿಮಿಷದಲ್ಲಿ ನದಿ ದಡ ತಲುಪುತ್ತಿದ್ದೆವು. ಒಮ್ಮೊಮ್ಮೆ ದೋಣಿ ಇತ್ತ ದಂಡೆಯ ಮೇಲಿದ್ದರೆ ಕೆಲವೊಮ್ಮೆ ಅತ್ತಲಾಗಿ. ಮಗದೊಮ್ಮೆ ದೋಣಿ ಇದ್ದರೂ ಹುಟ್ಟುಹಾಕುವವ ಇಲ್ಲ. ನದಿಯ ಮೇಲಿಂದ ಬೀಸುವ ತಂಪಾದ ಗಾಳಿ, ತಿಳಿಯಾದ ನೀರು, ಸುತ್ತಲೂ ಹಸಿರು ಎದುರಿಗೆ ದೋಣಿ. ಅತ್ಯಂತ ಸಂತಸದ ಕ್ಷಣವದು. ಮೊದಲು ಚಪ್ಪಲಿಯನ್ನು ದೋಣಿಯಲ್ಲಿ ಎಸೆದು ನಿಧಾನ ಅಪ್ಪನ ಕೈ ಹಿಡಿದು ದೋಣಿಯಲ್ಲಿ ಕುಳಿತುಕೊಳ್ಳುತ್ತಿದ್ದೆ. ಹೈಗುಂದದ ದಡ ತಲುಪುವವರೆಗೂ ಬೇರೆಯೇ ಲೋಕದಲ್ಲಿ ತೇಲುತ್ತಿದ್ದಂತೆ. ದೋಣಿ ನದಿಯ ಮಧ್ಯ ಬಂದಾಗ ಅಪ್ಪ ಕೈಯಲ್ಲಿ ನೀರನ್ನು ಎತ್ತಿ ಮುಖಕ್ಕೆ ಸಿ೦ಪಡಿಸಿಕೊಳ್ಳುತ್ತಿದ್ದರು. ಹೈಗುಂದ ತಲುಪಿ ದೋಣಿಯಿಂದ ಇಳಿದರೂ ಶಾಂತಳಾದ ಶರಾವತಿ ಮತ್ತು ದಡ ಸೇರಿಸಿದ ದೋಣಿಯನ್ನೇ ತಿರುಗಿ ನೋಡುತ್ತಿದ್ದೆ. ಜೀವನದಲ್ಲಿ ಬಯಸಿದಾಗೆಲ್ಲ ಸಿಗದ ಭಾಗ್ಯವದು.
ಹೈಗುಂದದಲ್ಲಿ ಮೊದಲಿಗೆ ಸ್ವಾಗತಿಸುತ್ತಿದ್ದದ್ದು ‘ ಆಲೆಮನೆ’. ಅಪ್ಪನ ಹೆಮ್ಮೆಯ ‘ ಹೈಗುಂದದ ಬೆಲ್ಲ’ ತಯಾರಾಗುವ ಸ್ಥಳ. ದಾರಿಯಲ್ಲಿ ಎಲ್ಲರೂ ನಗುಮೊಗದಿಂದ ಮಾತನಾಡಿಸುವವರೆ ! ಕೆಲಸ ಬಿಟ್ಟು ಓಡೋಡಿ ಬಂದು’ ಸಿಯಾಳ ಕೊಡ್ಲಾ’ ಎಂದು ಎಳನೀರನ್ನು ಕೊಡುತ್ತಿದ್ದರು. ಸಹಜ ಸರಳ ಜೀವನದ ಈ ಪರಿ ಜಗತ್ತಿನಲ್ಲಿ ಇಂದು ಕಾಣಸಿಗದು. ಅಜ್ಜನ ಮನೆಯ ಮುಂದೆ ಒಂದು ಬೃಹದಾಕಾರದ ಹುಣಸೆ ಮರ, ಎರಡಂತಸ್ತಿನ ಅಜ್ಜನಮನೆಯೂ ಬಹುದೊಡ್ಡ. ತಂಪಾದ ನೆಲ, ಜಗುಲಿಯಲ್ಲಿ ಕುಳಿತರೆ,
ಅಜ್ಜ ‘ ಆಸ್ರಿಗೆ ?’ ಎಂದು ಕೇಳಿದರೆ ಉತ್ತರವೇ ಬಾರದ ಭಯ- ಗೌರವ. ಅಜ್ಜ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ಮೊಮ್ಮಕ್ಕಳೆಂದರೆ ಕಾಳಜಿ- ಪ್ರೀತಿ. ಚೌತಿಹಬ್ಬದಲ್ಲ೦ತೂ ಊಟ ಮಾಡುವಾಗ ಸಾವಕಾಶವಾಗಿ ಬಂದು ಮೊಮ್ಮಕ್ಕಳ ಕೈಯಲ್ಲಿ ಒಂದೊಂದು ಹೆಚ್ಚಿನ ಲಡ್ಡುವನ್ನು ಕೊಡುತ್ತಿದ್ದರು.
ಹವ್ಯಕರ ಮೂಲ ಹೈಗುಂದದಲ್ಲಿ ‘ ಅಮ್ಮನವರ ಮನೆ’ ಯು ಬಹುಮುಖ್ಯ. ಕಬ್ಬಿನ- ಭತ್ತದ ಗದ್ದೆಯ ನಡುವೆ ನಡೆಯುತ್ತಾ ಮಳೆ ಇದ್ದರೆ ಜೇಡಿಮಣ್ಣಿನಲ್ಲಿ ಜಾರುತ್ತಾ ನದಿಯ ತೀರದಲ್ಲಿದ್ದ ಪುರಾತನ ದುರ್ಗಾದೇವಿಯ ಗುಡಿಗೆ ಹೋಗುವುದು ಇನ್ನೊಂದು ಅನುಭವ. ದೇವಿಯ ದರ್ಶನದ ಜೊತೆ ಎಲ್ಲವೂ ಮಂಗಳಕರವಾಗುತ್ತದೆ ಎಂದು ‘ ಪ್ರಸಾದ’ ಬಂದಾಗ ನಿರಮ್ಮಳ ಭಾವ.( ಕೆಲವು ವರುಷಗಳ ಹಿಂದೆ ನವರಾತ್ರಿ ಸಮಯದಲ್ಲ್ಲಿ ನನ್ನ ಅವಳಿ ಹೆಣ್ಣು ಮಕ್ಕಳ ಅಕ್ಷರಾಭ್ಯಾಸ ಈ ದೇವಿಯ ಸಾನಿಧ್ಯದಲ್ಲಿ ಆಗಿದ್ದು ದೈವೇಚ್ಛೆ.) ಹೈಗುಂದದ ಬಬ್ರಿಯಾಗಲಿ ಬುದ್ಧನ ಮೂರ್ತಿಗಳನ್ನಾಗಲಿ ನೋಡಿದಾಗ ಪ್ರಾಚೀನ ಕಥೆಗಳನ್ನು ಹೇಳುವಂತೆ ಭಾಸವಾಗುತ್ತಿತ್ತು. ಗುಡ್ಡದ ಮೇಲಿನ ಪಾಳು ಬ್ರಿಟಿಷ್ ಬಂಗಲೆಯನ್ನು ಅಪ್ಪ ತೋರಿಸುತ್ತಾ ಅವರು ಚಿಕ್ಕವರಿದ್ದಾಗಿನ ಘಟನೆಗಳನ್ನು ಕಥೆಗಳಂತೆ ಹೇಳುತ್ತಿದ್ದರು. ಹೆಚ್ಚಾಗಿ ಅದೇ ದಿನ ಸಂಜೆಯೊಳಗೆ ಹೊನ್ನಾವರಕ್ಕೆ ವಾಪಸಾಗುತ್ತಿದ್ದೆವು. ಕೆಲವೊಮ್ಮೆ ಹೈಗುಂದದಲ್ಲಿ ರಾತ್ರಿ ಕಳೆದು ನೆನಪು. ಹೈಗುಂದದಲ್ಲಿ ಆಗ ವಿದ್ಯುದ್ದೀಪ ಇರಲಿಲ್ಲ. ರಾತ್ರಿ ೭-೮ ಗಂಟೆಗೆಲ್ಲಾ ಜನ ಮಲಗುತ್ತಿದ್ದರು. ಹೊರಗೆ ಕಡು ಕತ್ತಲು . ಫ್ಯಾನಿನ ಕೃತಕ ಗಾಳಿ ಇರುತ್ತಿರಲಿಲ್ಲ. ಏನಿದ್ದರೂ ನದಿಯ ಮೇಲೆ ಬೀಸಿಬರುವ ತಂಗಾಳಿ, ಜೀರುಂಡೆಯ ಶಬ್ದ, ನಿಶ್ಚಿಂತೆಯ ನಿದ್ದೆ. ಅಜ್ಜ 90 ದಾಟಿ ನಮ್ಮೊಡನೆ ಇರತೊಡಗಿದ ಮೇಲೆ ಹೈಗುಂದಕ್ಕೆ ಹೋಗುವ ಸಂದರ್ಭಗಳು ದೇವಸ್ಥಾನದ ಪೂಜೆಗಳಿಗೆ ಸೀಮಿತವಾಯಿತು.
ಇತ್ತೀಚೆಗೆ ಸೇತುವೆಯಾಗಿದೆ ಎಂದು ಕೇಳಿದೆ. ದೋಣಿಗಾಗಿ ಕಾದು ಕುಳಿತು ನದಿ ದಾಟುವ ಅನುಭವ- ಸಂತಸ ಇನ್ನೆಲ್ಲಿ ಎಂದು ಬೇಸರವಾಯಿತು. ಸಿಮೆಂಟೀಕರಣವೆ ಆಧುನಿಕತೆ ಎಂದು ಒಪ್ಪಿದರೆ ಅದರೊಟ್ಟಿಗೆ ಉಚಿತವಾಗಿ ಬರುವ ಹಲವು ತಪ್ಪು ಒಪ್ಪುಗಳನ್ನು ಅನುಭವಿಸಬೇಕಾಗುತ್ತದೆ. ರೂಪು ರೇಷೆ ಇಲ್ಲದ ಬೆಳವಣಿಗೆ ಕೆಲವೊಮ್ಮೆ ಮೂರ್ಖತನವೆನಿಸಿಕೊಳ್ಳುತ್ತದೆ. ಕ್ರಮೇಣ ಹೈಗುಂದಕ್ಕೆ ಬರುವ ಪ್ರವಾಸಿಗರು ಹೆಚ್ಚಾಗಬಹುದು. ಅವರು ಬಿಟ್ಟುಹೋಗುವ ತ್ಯಾಜ್ಯಗಳು ವಿಲೇವಾರಿಯಾಗದೆ ಗದ್ದೆಗಳು ಪ್ಲಾಸ್ಟಿಕ್ ಮಯವಾಗಬಹುದು. ಅವರಿವರು ಆ- ಈ ಕ್ರಮ ಕೈಗೊಳ್ಳಬೇಕೆಂದು ಹೇಳುವುದರ ಬದಲು ಹೈಗುಂದದಕ್ಕೆ
ಭೇಟಿಕೊಡುವವರೆಲ್ಲ ಜವಾಬ್ದಾರಿಯುತವಾಗಿ ನಡೆದುಕೊಂಡರಷ್ಟೇ ಸಾಕು ಎಂದು ನನ್ನ ಅನಿಸಿಕೆ.
-ಸಹನಾ ಹರೇಕೃಷ್ಣ , ಟೊರೊಂಟೊ ,ಕೆನಡಾ
Submitted by: ಸಹನಾ ಹರೇಕೃಷ್ಣ
Submitted on: Thu Dec 31 2020 04:23:30 GMT+0530 (India Standard Time)
Category: Article
Language: ಕನ್ನಡ/Kannada
Tags: Haigunda, Karnataka, Environment, Memories
- Read your published work at https://readit.abillionstories.com
[category Article, ಕನ್ನಡ/Kannada, Original]
No comments:
Post a Comment